ಕುಂದಾಪುರ, ನ.23 (DaijiworldNews/HR): ಶಂಕರನಾರಾಯಣದ ಕುಳ್ಳುಂಜೆ ಕುಗ್ರಾಮದ ಮಾವಿನಕೊಡ್ಲು ಬಳಿಯ ಕೋವಿನಗುಡ್ಡೆ ಎಂಬಲ್ಲಿ ಸಾಂತು ಅಜ್ಜಿಗೆ ನೆಟ್ಟಿಗರು, ದಾನಿಗಳು, ಸರ್ಕಾರದ ನೆರವಿನಿಂದಲೇ ನಿರ್ಮಾಣವಾದ ಸಾಂತಜ್ಜಿಯ ಮನೆಯ ಗೃಹ ಪ್ರವೇಶ ಇಂದು ನಡೆಯಿತು.





ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ನೂತನ ಮನೆಯ ಒಳಗೆ ದೀಪ ಪ್ರಜ್ವಲನೆಗೈದು ಬಳಿಕ ವಯೋವೃದ್ದೆ ಸಾಂತಜ್ಜಿಯನ್ನು ಶಾಸಕರು ಗೌರವಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು "ಇದು ಮಾನವೀಯ ವ್ಯವಸ್ಥೆಯಾಗಿದ್ದು, ಪರಮಾತ್ಮನ ಪೂರ್ಣಾನುಗ್ರಹಕ್ಕೆ ಪಾತ್ರವಾಗುವ ವ್ಯವಸ್ಥೆ ಇದು. ಉಮೇಶ ಮತ್ತು ಅವರ ಸ್ನೇಹಿತರ ಪರಿಶ್ರಮವನ್ನು ಈ ಕುಟುಂಬ ಶಾಶ್ವತವಾಗಿ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ ಎಂದ ಅವರು, ಬೈಂದೂರು ಕ್ಷೇತ್ರ ನಂಜುಂಡ ಸ್ವಾಮಿ ವರದಿ ಪ್ರಕಾರ ಅತೀ ಹಿಂದುಳಿದ ಕ್ಷೇತ್ರ. 246 ವಾರ್ಡ್ಗಳು ಈ ಕ್ಷೇತ್ರದಲ್ಲಿವೆ. 20,000 ಮನೆಗಳಿವೆ. ತಲ್ಲೂರಿನಿಂದ ಶಿರೂರು ತನಕ 40 ಕಿ.ಮೀ ಕರಾವಳಿ ತೀರ, ಅರೆಶಿರೂರುವಿನಿಂದ ಮಚ್ಚಟ್ಟು ತನಕ 110 ಕಿ,ಮೀ ಮಲೆನಾಡು. ಈ ಭಾಗದಲ್ಲಿ ರೈತಾಪಿಗಳು ವಾಸಿಸುತ್ತಾರೆ. ಕರಾವಳಿಯಲ್ಲಿ ಮೀನುಗಾರರು ವಾಸಿಸುತ್ತಾರೆ. ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆಗಳು ಆಗಬೇಕಿದೆ. ಅದೆಷ್ಟು ಜನರಿಗೆ ಮನೆ ಇಲ್ಲದ ಪರಿಸ್ಥಿತಿ ಇದೆ"ಎಂದರು.
ಮನೆ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿರುವ ತಾ.ಪಂ.ಸದಸ್ಯ ಉಮೇಶ ಶೆಟ್ಟಿ ಮಾತನಾಡಿ, "ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಬಂದಾಗ ಸಾಂತಜ್ಜಿ ಟಾರ್ಪಲ್ ಸೂರಿನ ಮನೆ ನೋಡಿದ್ದೆವು ಸಾಂತಜ್ಜಿ ಅವರ ಮಗಳು, ಮೊಮ್ಮಗಳು. ಮತ್ತೆ ಯಾರೂ ಇಲ್ಲ ಹಾಗಾಗಿ ಅಜ್ಜಿಗೆ ಒಂದು ಮನೆ ನಿರ್ಮಿಸಿಕೊಡುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣ, ಮಾಧ್ಯಮಗಳ ಮೂಲಕ ಎರಡು ಲಕ್ಷದ ಐವತ್ತನಾಲ್ಕು ಸಾವಿರ ಅಜ್ಜಿಯ ಖಾತೆಗೆ ಬಂತು. ಶಂಕರನಾರಾಯಣ ಗ್ರಾಮ ಪಂಚಾಯತ್ನಿಂದ ಅಂದಿನ ಅಧ್ಯಕ್ಷರಾದ ಸದಾಶಿವ ಶೆಟ್ಟರು ಮನೆ ಮಂಜೂರಾತಿ ಮಾಡಿಸಿದರು. ಅದರ 90 ಸಾವಿರ ಹಣ ಬಂದಿದೆ. ಕ್ಷೇತ್ರದ ಶಾಸಕರು ಸಹಕಾರ ನೀಡಿದ್ದಾರೆ. ಒಂದೊಂದು ಜವಾಬ್ದಾರಿಯನ್ನು ಒಬ್ಬೊಬ್ಬರು ವಹಿಸಿಕೊಂಡು ಇವತ್ತು ಮನೆ ಗೃಹ ಪ್ರವೇಶ ಆಗುತ್ತಿದೆ" ಎಂದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ರೋಹಿತ್ ಕುಮಾರ ಶೆಟ್ಟಿ, ಬಿಜೆಪಿ ಮುಖಂಡರಾದ ಡಾ.ಸಚ್ಚಿದಾನಂದ, ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.