ಮಂಗಳೂರು, ನ. 23 (DaijiworldNews/SM): ನಗರದ ದ್ವಿಚಕ್ರ ವಾಹನ ಶೋರೂಂವೊಂದರ ಮುಂದೆ ನಿಲ್ಲಿಸಲಾಗಿದ್ದ ದ್ವಿಚಕ್ರವಾಹನವೊಂದನ್ನು ಹಾಡಹಗಲಲ್ಲೇ ಖದೀಮನೊಬ್ಬ ಎಗರಿಸಿರುವ ಘಟನೆ ನಡೆಸಿದಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ.




ನಗರದ ಮಲ್ಲಿಕಟ್ಟೆ ಸಮೀಪದಲ್ಲಿರುವ ದ್ವಿಚಕ್ರ ವಾಹನಗಳ ಶೋರೂಂ ಹಾಗೂ ಸರ್ವಿಸ್ ಸ್ಟೇಷನ್ ಎದುರುಗಡೆ ಈ ಘಟನೆ ನಡೆದಿದೆ. ದೃಶ್ಯದಲ್ಲಿ ಸೆರೆಯಾಗಿರುವ ಪ್ರಕಾರ ಶೋರೂಂ ಎದುರಲ್ಲಿ ದ್ವಿಚಕ್ರವಾಹನ ನಿಲ್ಲಿಸಲಾಗಿತ್ತು. ಖದೀಮನೊಬ್ಬ ಅಲ್ಲಿಗೆ ಬಂದಿದ್ದ. ಕೆಲ ಹೊತ್ತು ಅತ್ತಿಂದಿತ್ತ ಅಲೆದಾಡಿದ್ದಾನೆ. ಬಳಿಕ ತನ್ನ ಸುತ್ತ ಯಾರೂ ಇಲ್ಲ ಎಂಬುವುದನ್ನು ಖಚಿತಪಡಿಸಿಕೊಂಡ ಖದೀಮ ಏಕಾಏಕಿ ದ್ವಿಚಕ್ರವಾಹನದಲ್ಲಿ ಕುಳಿತುಕೊಂಡು ವಾಹನವನ್ನು ಎಗರಿಸಿದ್ದಾನೆ.
ಇನ್ನು ಶೋರೂಂ ಆಗಿರುವ ಕಾರಣದಿಂದಾಗಿ ಹೊಸ ವಾಹನಗಳನ್ನು ಶೋರೂಂ ಮುಂಭಾಗದಲ್ಲಿರಿಸಲಾಗಿತ್ತು. ಈ ಪೈಕಿ ಒಂದು ವಾಹನದ ಕೀ ಕೂಡ ಅದರಲ್ಲಿತ್ತು. ಹೊಸ ವಾಹನವಾಗಿರುವ ಕಾರಣ ನೋಂದಣಿ ಕೂಡ ಆಗಿರಲಿಲ್ಲ. ಇವುಗಳನ್ನೇ ಬಂಡವಾಳವಾಗಿ ಪಡೆದುಕೊಂಡ ಪೋರ ನಿಶ್ಚಿಂತೆಯಿಂದ ವಾಹನ ಎಗರಿಸಿ ಪರಾರಿಯಾಗಿದ್ದು, ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.