ಬೆಂಗಳೂರು , ಜೂ 07: ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಬಹುನಿರೀಕ್ಷಿತ ಕಾಲಾ ಚಿತ್ರ ಬಿಡುಗಡೆಗೆ ಕರ್ನಾಟಕದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಹೆಚ್ಚಿನ ಜಿಲ್ಲೆಗಳಲ್ಲಿ ಚಿತ್ರ ಪ್ರದರ್ಶನ ರದ್ದಾಗಿದೆ.
ಚಿತ್ರ ಪ್ರದರ್ಶನಕ್ಕೆ ಕನ್ನಡ ಪರ ಸಂಘಟನೆಗಳು ವ್ಯಾಪಕ ವಿರೋಧ ವ್ಯಕ್ತ ಪಡಿಸುತ್ತಿದ್ದು, ರಾಜಧಾನಿ ಬೆಂಗಳೂರಿನಲ್ಲಿ ನೂರಾರು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ರಾತ್ರಿಯಿಂದಲೇ ಬೀದಿಗಳಿದು ಚಿತ್ರ ಪ್ರದರ್ಶನ ಮಾಡದಂತೆ ಮನವಿ ಮಾಡುತ್ತಿದ್ದಾರೆ.
ಕೆಲವು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾದರೂ ಸಿನಿಮಾ ಪ್ರದರ್ಶನ ಮಾಡದಂತೆ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ರಜನೀಕಾಂತ್ ವಿರುದ್ದ ಧಿಕ್ಕಾರ ಕೂಗಿ, ರಜನಿ ಕಾಂತ್ ಅಭಿಮಾನಿಗಳಲ್ಲಿ ಚಿತ್ರ ವೀಕ್ಷಿಸಬೇಡಿ ಎಂದು ಮನವಿ ಮಾಡಿದ್ದಾರೆ.
ಪ್ರತಿಭಟನೆಯ ಕಾವಿನ ಹಿನ್ನಲೆಯಲ್ಲಿ ಹಲವೆಡೆ ಚಿತ್ರಾಭಿಮಾನಿಗಳು ಥಿಯೇಟರ್ ಕಡೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಮಂಗಳೂರಿನಲ್ಲಿ ಚಿತ್ರ ಪ್ರದರ್ಶನಕ್ಕೆ ಥಿಯೇಟರ್ ಮಾಲಕರು ಸಿದ್ದತೆ ನಡೆಸುತ್ತಿದ್ದು, ಕನ್ನಡ ಪರ ಸಂಘಟನೆಗಳು ಚಿತ್ರ ಪ್ರದರ್ಶನಕ್ಕೆ ಅಡ್ದಿ ನಡೆಸದೇ ಕೇವಲ ಖಂಡನೆಯ ಮೂಲಕ ವಿರೋಧಿಸುತ್ತಿದ್ದಾರೆ.ಮಂಗಳೂರಿನ ಬಿಜೈಯಲ್ಲಿರುವ ಭಾರತ್ ಮಾಲ್ ನ ಬಿಗ್ ಸಿನೆಮಾ ಮತ್ತು ಪಾಂಡೇಶ್ವರದ ಫೋರಂ ಮಾಲ್ ನ ಪಿವಿಆರ್ ಸಿನಿಮಾದಲ್ಲಿ ‘ಕಾಲ' ಚಿತ್ರ ಪ್ರದರ್ಶನ ಕಾಣಲಿದೆ.
ಕಾವೇರಿ ವಿಷಯವಾಗಿ ರಜನಿಕಾಂತ್ ನೀಡಿದ ಹೇಳಿಕೆಯನ್ನು ಖಂಡಿಸಿ, ಕನ್ನಡಪರ ಸಂಘಟನೆಗಳು 'ಕಾಲಾ' ಬಿಡುಗಡೆಗೆ ತಡೆಯೊಡ್ಡಿದ್ದವು. ಚಿತ್ರ ಬಿಡುಗಡೆಗೆ ಕನ್ನಡಪರ ಸಂಘಟನೆಗಳು ಅಡ್ಡಿಪಡಿಸುವ ಬೆದರಿಕೆ ಹಿನ್ನಲೆಯಲ್ಲಿ ಸೂಕ್ತ ರಕ್ಷಣೆ ನೀಡಲು ನಿರ್ದೇಶಿಸುವಂತೆ ಕೋರಿ ಚಿತ್ರ ನಿರ್ಮಾಣ ಸಂಸ್ಥೆಯು ರಿಟ್ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಪೀಠವು, ಚಿತ್ರ ಪ್ರದರ್ಶನದ ವೇಳೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಭದ್ರತೆ ನೀಡುವಂತೆ ಪೊಲೀಸ್ ಇಲಾಖೆಗೆ ಆದೇಶ ನೀಡಿದೆ.