ಕಾಸರಗೋಡು,ನ.24 (DaijiworldNews/HR): ಪೆರ್ಲ ಮಣಿಯಂಪಾರೆ ಸಮೀಪದ ಹೊಳೆ ಪಾಲಾಗಿದ್ದ ಉಪ್ಪಳ ನಿವಾಸಿಯ ಮೃತದೇಹ ಮೂರು ದಿನಗಳ ಬಳಿಕ ಇಂದು ಪತ್ತೆಯಾಗಿದೆ.

ಮೃತಪಟ್ಟ ವ್ಯಕ್ತಿಯನ್ನು ಉಪ್ಪಳ ಹಿದಾಯತ್ ನಗರದ ಇಮ್ತಿಯಾಜ್ ಮುಹಮ್ಮದ್ (43) ಎಂದು ಗುರುತಿಸಲಾಗಿದೆ.
ಶನಿವಾರ ಸಂಜೆ ಸ್ನಾನಕ್ಕಿಳಿದ ಸಂದರ್ಭದಲ್ಲಿ ಹೊಳೆಯಲ್ಲಿ ಮುಳುಗಿದ್ದರು. ಜೊತೆಯಲ್ಲಿದ್ದ ಯುವತಿಯೋರ್ವಳು ನೀಡಿದ ಮಾಹಿತಿಯಂತೆ ಸ್ಥಳೀಯರು, ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಶೋಧ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಈ ನಡುವೆ ಇಂದು ಬೆಳಿಗ್ಗೆ ಸ್ಥಳೀಯರು ಮೃತದೇಹವನ್ನು ಪತ್ತೆ ಹಚ್ಚಿದ್ದು, ಘಟನೆ ನಡೆದ ಅಲ್ಪ ದೂರ ಮರದ ಬೇರೊಂದಕ್ಕೆ ಸಿಲುಕಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತದೇಹವನ್ನು ಬದಿಯಡ್ಕ ಠಾಣಾ ಪೊಲೀಸರು ಮಹಜರು ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಈ ಹಿಂದೆ ಹಡಗು ಉದ್ಯೋಗಿಯಾಗಿದ್ದ ಇಮ್ತಿಯಾಜ್ ಇದೀಗ ಟ್ಯಾಕ್ಸಿ ಚಾಲಕರಾಗಿ ದುಡಿಯುತ್ತಿದ್ದರು.