ಮಂಗಳೂರು, ನ. 24 (DaijiworldNews/MB) : ''ಕಪಿಲಾ ಗೋ ಶಾಲೆ ಕಟ್ಟಡ ಕೆಡವಲು ಅಧಿಕಾರಿಗೆ ಕುಮ್ಮಕ್ಕು ನೀಡುತ್ತಿರುವುದು ನೀವೇನಾ'' ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಕಾಳಿಕಾ ಮಠದ ಶ್ರೀರಿಷಿ ಕುಮಾರ ಸ್ವಾಮೀಜಿಯವರು ಪ್ರಶ್ನಿಸಿದ್ದಾರೆ.


ಕೆಂಜಾರಿನ ಕಪಿಲಾ ಗೋ ಶಾಲೆಯ ಕಟ್ಟಡದ ಜಮೀನನ್ನು ಸರ್ಕಾರ ಕೋಸ್ಟ್ ಗಾರ್ಡ್ಗೆ ಮಂಜೂರು ಮಾಡಲು ವ್ಯವಸ್ಥೆ ಮಾಡುತ್ತಿದ್ದು ಈ ಹಿನ್ನೆಲೆ ಕಟ್ಟಡವನ್ನು ತೆರವುಗೊಳಿಸಲು ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ''ಭಾರತ ದೇಶದಲ್ಲಿ ಯಾವ ಗೋವುಗಳ ಸಂತತಿ ನಾಶವಾಗುತ್ತಿದೆಯೋ ಆ ಕಪಿಲಾ ಎನ್ನುವ 95 ಗೋವುಗಳು ಕಪಿಲಾ ಗೋ ಶಾಲೆಯಲ್ಲಿವೆ ಎಂದು ಹೇಳಿದ್ದು, ''ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯು ಪ್ರಣಾಳಿಕೆಯಲ್ಲಿ ನಾವು ಗೆದ್ದರೆ 24 ಗಂಟೆಗಳಲ್ಲಿ ಗೋ ಹತ್ಯೆ ನಿಷೇಧ ಎಂದು ಹೇಳಿದ್ದರು. ಆದರೆ ಈಗ ನೋಡಿದರೆ ಅವರು ಗೋ ಹತ್ಯೆ ನಿಷೇಧ ಮಾಡುತ್ತಿದ್ದರೋ ಗೋ ಶಾಲೆಯನ್ನು ನಿಷೇಧ ಮಾಡುತ್ತಿದ್ದಾರೋ ಅನ್ನುವ ಅನುಮಾನ ಮೂಡುತ್ತಿದೆ'' ಎಂದು ಕಾಳಿಕಾ ಮಠದ ಶ್ರೀರಿಷಿ ಕುಮಾರ ಸ್ವಾಮೀಜಿ ಶಂಕೆ ವ್ಯಕ್ತಪಡಿಸಿದ್ದಾರೆ.
''ಈ ಪ್ರಾಂತ್ಯದಲ್ಲಿ ಕೇಸರಿ ಶಾಲು ಧರಿಸಿ ಜೈ ಗೋ ಮಾತಾ, ಜೈ ಗೋ ಮಾತಾ ಎಂದು ಹೇಳಿ ಬೀದಿ ಬೀದಿ ತಿರುಗಿ ಹಿಂದೂಗಳ ಮತ ಪಡೆದ ನಳಿನ್ ಕುಮಾರ್ ಅವರೇ, ಒಂದು ಹಿಂದೂ ಧರ್ಮದ ಹೆಸರನ್ನು ಹೇಳಿಕೊಂಡು ಅಧಿಕಾರವನ್ನು ಸ್ವೀಕಾರ ಮಾಡಿದ ಯಡಿಯೂರಪ್ಪನವರೇ ನಿಮ್ಮ ಕಣ್ಣಿಗೆ ಈ ಕಪಿಲಾ ಗೋ ಶಾಲೆ ಕಾಣುವುದಿಲ್ಲವೇ?'' ಎಂದು ಪ್ರಶ್ನಿಸಿದ್ದಾರೆ.
''ಓರ್ವ ಕೇರಳ ಮೂಲದ ಅಧಿಕಾರಿ ಇಲ್ಲಿಗೆ ಬಂದು ಈ ಕಟ್ಟಡವನ್ನು ಹೊಡೆಯುವ ಬೆದರಿಕೆ ಹಾಕುವುದಾದರೆ ಇದಕ್ಕೆ ಕುಮ್ಮಕ್ಕು ನೀಡುವವರು ಯಾರು? ನಳಿನ್ ಕುಮಾರ್ ಅವರೇ ನೀವೇನಾ. ನಿಮ್ಮ ಬೆಂಬಲವಿಲ್ಲದೇ ಇದು ನಡೆಯುತ್ತಿದೆಯೇ?'' ಎಂದು ಕೇಳಿದ್ದಾರೆ.
''ನಳಿನ್ ಕುಮಾರ್ ಅವರ ಮೇಲೆ ಇರುವ ನಂಬಿಕೆ ಉಳಿಯಬೇಕಾದರೆ ಈ ಗೋ ಶಾಲೆ ಉಳಿಯಬೇಕು. ಭಾಷಣದಲ್ಲಿ ಗೋ ಸಂತತಿ ಉಳಿಸಲು ಹೇಳುವವರು ಈಗ ಗೋ ಸಂತತಿಯನ್ನು ಉಳಿಸುವವರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದೀರಿ'' ಎಂದು ಹೇಳಿದರು.
''ಬಿಜೆಪಿಯವರು ಬರೀ ಸುಳ್ಳು ಹೇಳಿಕೊಂಡೇ ಜೀವನ ಮಾಡುತ್ತಿದ್ದೀರಿ. ಹಿಂದೂ ಪರ ನಾವು ಎಂಬ ನಿಮ್ಮ ಮಾತು ದೊಡ್ಡ ಘೋರ ಸುಳ್ಳು. ಗೋವುಗಳ ರಕ್ಷಣೆ ಎಂದು ಹೇಳಿದ ನೀವು ಯಾವಾಗ ಗೋ ರಕ್ಷಣೆ ಮಾಡುತ್ತೀರಿ. ಯಾವಾಗ ಗೋ ಹತ್ಯೆ ನಿಷೇಧ ಮಾಡುತ್ತೀರಿ? ನಿಮ್ಮ ಪ್ರಣಾಳಿಕೆ ಸುಳ್ಳಾ?'' ಎಂದು ಪ್ರಶ್ನಿಸಿದರು.
''ಹಾಗೆಯೇ ಈ ಸರ್ಕಾರವು ಈ ಗೋ ಶಾಲೆಯನ್ನು ಉಳಿಸದಿದ್ದರೆ, ಈ ಸರ್ಕಾರ ಹಿಂದೂ ಪರವಾದ ಸರ್ಕಾರವಲ್ಲ. ಗೋವಿಗೆ ರಕ್ಷಣೆ ಇಲ್ಲವಾದರೆ ನೀವು ಕಾವಿ ಶಾಲು ಧರಿಸಿ ಯಾಕೆ ಓಡಾಡುತ್ತೀರಿ. ಯಾವುದೇ ಕ್ರಮವಾದರೂ ಕಾನೂನು ಪ್ರಕಾರವಾಗಿ ಕೈಗೊಳ್ಳಿ. ಅದನ್ನು ಬಿಟ್ಟು ಬೆದರಿಕೆ ಹಾಕುವುದಲ್ಲ'' ಎಂದು ಹೇಳಿದರು.
''ನಳಿನ್ ಅವರು ಅಧಿಕಾರಿಗಳೊಂದಿಗೆ ಸೇರಿದ್ದಾರೆ ಎಂಬ ಅನುಮಾನ ನಮ್ಮಲ್ಲಿ ಇದೆ'' ಎಂದು ಹೇಳಿದರು.
ಹಾಗೆಯೇ ಮಂಗಳೂರಿನ ವಜ್ರದೇಹಿ ಮಠದ ಶ್ರೀಗಳು, ಪೇಜಾವರ ಶ್ರೀಗಳು, ಅಷ್ಟಮಠದ ಶ್ರೀಗಳು ಈ ಗೋ ಶಾಲೆಯನ್ನು ಉಳಿಸಬೇಕು ಎಂದು ವಿನಂತಿಸಿದರು.