ಮಂಗಳೂರು, ನ. 24 (DaijiworldNews/MB) : ನಗರದಲ್ಲೊಬ್ಬರು ಅಪರೂಪದ ಪಕ್ಷಿ ಪ್ರೇಮಿ ಪಕ್ಷಿಗಳಿಗೆ ಪ್ರತಿದಿನವೂ ಆಹಾರ ನೀಡುತ್ತಿದ್ದಾರೆ. ಅವರ ಈ ಕಾರ್ಯಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ.




ಮಂಗಳೂರಿನ ಕೆಪಿಟಿ ಸಪ್ತಗಿರಿ ಪೆಟ್ರೋಲ್ ಪಂಪ್ ಸಿಬ್ಬಂದಿ ಗಣೇಶ್ ಪೂಜಾರಿ ಕುತ್ತಾರ್ ಅವರು ನಿತ್ಯ ನಿರಂತರವಾಗಿ ಪಕ್ಷಿಗಳಿಗೆ ಆಹಾರ ಉಣಿಸುತ್ತಿದ್ದಾರೆ.
ತನ್ನ ಕಠಿಣ ದುಡಿಮೆಯಲ್ಲಿ ಕಡಿಮೆ ಸಂಬಳ ದೊರೆಯುತ್ತಿದ್ದರೂ ಕೂಡಾ ಪಕ್ಷಿಗಳಿಗೆ ಅವರು ಕಾರ್ಯ ನಿರ್ವಹಿಸುವ ಪೆಟ್ರೋಲ್ ಪಂಪ್ ಬಳಿ ಪ್ರತಿ ದಿನವೂ ಆಹಾರ ಪೂರೈಸುವ ಮೂಲಕ ವಿಶಾಲವಾದ ಹೃದಯವಂತಿಕೆಯನ್ನು ಮೆರೆದಿದ್ದಾರೆ.
ಇನ್ನು ಅವರ ಉದ್ಯೋಗಕ್ಕೆ ರಜೆ ಇದ್ದರೂ ಕೂಡಾ ಗಣೇಶ್ ಪೂಜಾರಿಯವರು ಪಕ್ಷಿಗಳಿಗೆ ಆಹಾರ ಪೂರೈಸುವ ಕಾರ್ಯಕ್ಕೆ ಎಂದೂ ರಜೆ ನೀಡಿದವರಲ್ಲ. ತಮ್ಮ ರಜಾ ದಿನದಲ್ಲೂ ಪೆಟ್ರೋಲ್ ಪಂಪ್ ಬಳಿ ಬಂದು ಅವರು ಪಕ್ಷಿಗಳಿಗೆ ಆಹಾರ ಪೂರೈಸುತ್ತಾರೆ.
ಹಾಗೆಯೇ ಅವರು ಪಕ್ಷಿಗಳಿಗೆ ಕಾಳು ಹಾಕಿದರಷ್ಟೇ ಪಕ್ಷಿಗಳು ಬಂದು ಆಹಾರ ಸೇವಿಸುತ್ತದೆ ಎಂಬುದು ಕೂಡಾ ಅಚ್ಚರಿಯ ಸಂಗತಿಯಾಗಿದೆ.
ಈ ಬಗ್ಗೆ ದೈಜಿವರ್ಲ್ಡ್ ಜೊತೆ ಮಾತನಾಡಿದ ಗಣೇಶ್ ಅವರು, ''ಪಂಪ್ ಬಳಿ ಪಕ್ಷಿಗಳನ್ನು ನೋಡಿ ಅದಕ್ಕೆ ಕಾಳು ಹಾಕಲು ಪ್ರಾರಂಭಿಸಿದೆ. ಲಾಕ್ಡೌನ್ಗೂ ಮೊದಲು, ಅಂದರೆ ಸುಮಾರು ೮ ತಿಂಗಳಿನಿಂದ ನಾನು ಪಕ್ಷಿಗಳಿಗೆ ಆಹಾರ ಪೂರೈಸುತ್ತಿದ್ದೇನೆ. ಲಾಕ್ಡೌನ್ ಸಂದರ್ಭದಲ್ಲಿ ಪಕ್ಷಿಗಳಿಗೂ ಆಹಾರ ದೊರೆಯುವುದು ಕಷ್ಟವೆನೆಸಿತು. ಲಾಕ್ಡೌನ್ ಸಂದರ್ಭದಲ್ಲೂ ನನ್ನ ಸ್ವಂತ ಖರ್ಚಿನಲ್ಲೇ ಪಕ್ಷಿಗಳಿಗೆ ಆಹಾರ ನೀಡುತ್ತಿದ್ದೆ. ಮೊದಮೊದಲು 2-3 ಪಾರಿವಾಳಗಳು ಬರುತ್ತಿದ್ದವೂ ಬಳಿಕ ಪಾರಿವಾಳಗಳ ಸಂಖ್ಯೆ ಹೆಚ್ಚಳವಾಗುತ್ತಲ್ಲೇ ಹೋಗಿದ್ದು 100 -150 ರಷ್ಟು ಪಕ್ಷಿಗಳು ಬರುತ್ತದೆ'' ಎಂದು ಹೇಳಿದ್ದಾರೆ.
''ಈ ಪಕ್ಷಿಗಳು ಸರಿಯಾಗಿ 2 ಗಂಟೆಗೆ ಪೆಟ್ರೋಲ್ ಪಂಪ್ ಬಳಿಗೆ ಬರುತ್ತದೆ. ಮೂರು ಗಂಟೆಯವರೆಗೆ ಇರುತ್ತದೆ. ಪ್ರತಿ ದಿನ ಮಧ್ಯಾಹ್ನ ಆಹಾರ ನೀಡುತ್ತೇನೆ'' ಎಂದು ತಿಳಿಸಿದ್ದಾರೆ.
ಇನ್ನು''100 - 150 ಪಕ್ಷಿಗಳಿಗೆ ಆಹಾರ ಪೂರೈಸಲು ನಿಮಗೆ ಕಷ್ಟವಾಗುವುದಿಲ್ಲವೇ, ನಿಮಗೆ ಯಾರಾದರೂ ಸಹಾಯ ಮಾಡುತ್ತಾರೆಯೇ'' ಎಂಬ ದೈಜಿವರ್ಲ್ಡ್ ನಿರೂಪಕರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗಣೇಶ್ ಅವರು, ''ಕಷ್ಟವಾಗುತ್ತದೆ, ಆದರೆ ಅದಕ್ಕೆ ಆಹಾರ ಬೇಕಾಲ್ಲವೇ. ನಮ್ಮ ಪಂಪ್ ಸಿಬ್ಬಂದಿಗಳೂ ಪಕ್ಷಿಗೆ ಆಹಾರ ಪೂರೈಸಲು ನನಗೆ ಸಹಾಯ ಮಾಡುತ್ತಾರೆ'' ಎಂದು ತಿಳಿಸಿದ್ದಾರೆ.