ಉಡುಪಿ, ನ. 23 (DaijiworldNews/SM): ಇಲ್ಲೊಬ್ಬಳು ಮುದ್ದಾದ ವಿಕಲ ಚೇತನ ಯುವತಿಯ ಕಲ್ಯಾಣಕ್ಕೆ ಕಂಕಣ ಕೂಡಿ ಬಂದಿದೆ. ಕಾಲುಗಳೆರಡು ಬಲಹೀನವಾಗಿರುವ ಈ ಯುವತಿಯ ಅದೃಷ್ಟ ಬಲ ಮಾತ್ರ ದೃಢವಾಗಿದೆ. ದುಬೈನಲ್ಲಿ ಉದ್ಯೋಗ ಮಾಡುತ್ತಿರುವ ಯುವಕ ತಾನೇ ಮುಂದೆ ಬಂದು ಇವಳ ಬಾಳಿಗೆ ಬೆಳಕು ನೀಡಿದ್ದಾರೆ. ಇದು ಉಡುಪಿಯಲ್ಲಿ ನಡೆದ ಅಪರೂಪದ ಮದುವೆಯಾಗಿದೆ.



ಮಾನವೀಯತೆ ಇನ್ನೂ ಜೀವಂತವಾಗಿದೆ ಅನ್ನೋದಕ್ಕೆ ಈ ಮದುವೆಯೇ ಸಾಕ್ಷಿಯಾಗಿದೆ. ಪೋಲೀಯೋಗೆ ತುತ್ತಾಗಿ ಎರಡೂ ಕಾಲುಗಳಲ್ಲಿ ಈಕೆ ಬಲ ಕಳೆದುಕೊಂಡಿದ್ದಾಳೆ. ಉಡುಪಿಯ ಸುನೀತಾ ಹಾಗೂ ಸಂದೀಪ್ ಈ ರೀತಿ ಅಪರೂಪದ ಮದುವೆಗೆ ಸಾಕ್ಷಿಯಾಗಿದ್ದಾರೆ. ಪಿಯುಸಿವರಗೆ ಓದಿರುವ ಸುನೀತಾ ತಂದೆ ತಾಯಿಯ ಆಶ್ರಯದಲ್ಲಿ ಬೆಳೆದಿದ್ದರು.
ತನ್ನ ಕಾಲಿನಂತೆ ಬದುಕು ಕೂಡಾ ಬರಡಾಗುತ್ತೆ ಎಂದು ಖಿನ್ನತೆಗೆ ಜಾರಿದ್ದರು. ಆದರೆ ಕಾಲು ಕಿತ್ತುಕೊಂಡು ಕಷ್ಟ ಕೊಟ್ಟ ದೇವರು ಮದುವೆಯ ವಿಚಾರದಲ್ಲಿ ಈಕೆಯ ಭಾಗ್ಯದ ಬಾಗಿಲು ತೆರೆದಿದ್ದಾರೆ. ದುಬೈನ ಆಯಿಲ್ ಕಂಪೆನಿಯಲ್ಲಿ ಉದ್ಯೋಗ ಮಾಡುವ ಸಂದೀಪ್ ತಾನೇ ಮುಂದೆ ಬಂದು ಈಕೆಯ ಜೀವನ ಪಯಣಕ್ಕೆ ಆಧಾರವಾಗಲು ನಿರ್ಧರಿಸಿದ್ದಾರೆ. ಮನೆಯವರ ಒಪ್ಪಿಗೆಯಂತೆ ಸೋಮವಾರ ಈ ಅಪರೂಪದ ಮದುವೆಗೆ ಉಡುಪಿಯ ಕರಂಬಳ್ಳಿ ದೇವಸ್ಥಾನ ಸಾಕ್ಷಿಯಾಯಿತು.
ಆತುರದ ನಿರ್ಧಾರ ತೆಗೆದುಕೊಳ್ಳೋದು ಸುಲಭ, ಆದರೆ ಜೀವನವಿಡೀ ನಿಭಾಯಿಸುವುದು ಕಷ್ಟ. ಆದರೆ ಈ ಜೋಡಿಯ ವಿಚಾರದಲ್ಲಿ ಹಾಗಾಗುವುದಿಲ್ಲ ಅನ್ನೋದು ಮನೆಯವರ ಅಭಿಪ್ರಾಯ. ಇಂತಹ ಹುಡುಗಿಗೆ ಬಾಳು ನೀಡಬೇಕೆಂದು ಮೊದಲೇ ನಿರ್ಧರಿಸಿದ್ದ ಸಂದೀಪ್, ಸಂಬಂಧಿಕರ ಮೂಲಕ ಈ ಯುವತಿಯ ಬಗ್ಗೆ ವಿಚಾರಿಸಿ ತಾನೇ ಮುಂದೆ ಬಂದು ವಿವಾಹವಾಗಿದ್ದಾರೆ. ಇನ್ನೇನು ಮನೆಮಗಳ ಬಾಳು ನರಕವಾಯ್ತು ಎಂದು ಕೊರಗುತ್ತಿದ್ದ ಸುನಿತಾ ಕುಟುಂಬದವರಿಗೆ ಜಗತ್ತಿನ ಭಾರವೆಲ್ಲಾ ಹಗುರವಾದಷ್ಟು ಖುಷಿಯಾಗಿದ್ದು, ಮದುವೆ ಮುಗುಯುವವರೆಗೂ ಆನಂದ ಬಾಷ್ಪ ಸುರಿಸಿ ಪ್ರೀತಿಯ ಮಗಳನ್ನು ಬೀಳ್ಕೊಟ್ಟಿದ್ದಾರೆ.
ಈ ಅಪರೂಪದ ಜೋಡಿ ಸದಾ ಸುಖವಾಗಿರಲಿ ಎಂಬುದಷ್ಟೇ ನಮ್ಮ ವಾಹಿನಿಯ ಹಾರೈಕೆ.