ಮಂಗಳೂರು, ನ. 25 (DaijiworldNews/MB) : ಗ್ರಾಮಗಳಿಗೆ ಕುಡಿಯುವ ನೀರು, ಕೃಷಿ ಚಟುವಟಿಕೆ ಹಾಗೂ ಅಂತರ್ಜಾಲ ಅಭಿವೃದ್ಧಿಗೆ ಪೂರಕವಾಗಿ ಅಂದಾಜು 174 ಕೋಟಿ ಮೊತ್ತದಲ್ಲಿ ನೇತ್ರಾವತಿ ನದಿಗೆ ಸೇತುವೆ ಸಹಿತ ಉಪ್ಪು ನೀರು ತಡೆ ಅಣೆಕಟ್ಟು ನಿರ್ಮಾಣವಾಗಲಿದೆ ಎಂದು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸಕ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು ಜೆ.ಸಿ. ಮಾಧುಸ್ವಾಮಿ ಹೇಳಿದರು.


ಅವರು ಮಂಗಳವಾರ ಹರೇಕಳ ಸಮೀಪವಿರುವ ನೇತ್ರಾವತಿ ನದಿಗೆ ಸೇತುವೆ ಸಹಿತ ಉಪ್ಪು ನೀರು ತಡೆ ಅಣೆಕಟ್ಟು ನಿರ್ಮಾಣ ಕಾಮಗಾರಿಯ ಪರಿವೀಕ್ಷಣೆ ಮಾಡಿ, ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು.
ಉಪ್ಪು ನೀರು ತಡೆ ಅಣೆಕಟ್ಟು ಸಹಿತ ಸಂಪರ್ಕ ಸೇತುವೆ ನಿರ್ಮಿಸುವುದು ಈ ಭಾಗದ ಜನರ ಬಹಳ ದಿನದ ಬೇಡಿಕೆಯಾಗಿದ್ದು, ಅದರಂತೆ ಹರೇಕಳದ ಎಡ ದಂಡೆಯಿಂದ ಅಡ್ಯಾರು-ಕಣ್ಣೂರಿನ ಬಲ ದಂಡೆಯವರಗೆ ನೇತ್ರಾವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಒಟ್ಟು 52 ಕಿಂಡಿಗಳ, 520 ಮೀಟರ್ ಉದ್ದದ, 661.54 ಎಮ್ಸಿಎಫ್ಟಿ ನೀರು ಶೇಖರಣೆ ಸಾಮರ್ಥ್ಯವಿರುವ ಕಿಂಡಿ ಅಣೆಕಟ್ಟು ನಿರ್ಮಾಣಗೊಳ್ಳಲಿದೆ. ಜೊತೆಗೆ 10 ಮೀಟರ್ ಅಗಲದ ಸೇತುವೆ ನಿರ್ಮಾಣವಾಗಲಿದೆ ಎಂದರು.
ಈ ಯೋಜನೆಯು ಬಹುಪಯೋಗಿ ಯೋಜನೆಯಾಗಿದ್ದು, ಈ ನಿರ್ಮಾಣ ಕಾಮಗಾರಿಯಿಂದ ಸಿಹಿ ನೀರನ್ನು ಸಂಗ್ರಹಿಸಲಾಗುತ್ತದೆ, ಸಂಗ್ರಹಗೊಂಡ ನೀರನ್ನು ಶುದ್ಧೀಕರಿಸಿ, ಗ್ರಾಮಗಳಿಗೆ ಶಾಶ್ವತವಾದ ಕುಡಿಯುವ ನೀರನ್ನು ಪೂರೈಸಲು ಸಾಧ್ಯವಾಗುತ್ತದೆ. ಜತೆಗೆ ಕೃಷಿ ಚಟುವಟಿಕೆಗಳಿಗೆ ಉಪಯೋಗಿಸಲು ಅನುಕೂಲವಾಗುತ್ತದೆ. ಇದರಿಂದಾಗಿ ಅಂತರ್ಜಲ ಮಟ್ಟವು ವೃದ್ಧಿಯಾಗುತ್ತದೆ. ಈ ಸಂಪರ್ಕ ಸೇತುವೆಯಿಂದ ನದಿಯ ಎರಡೂ ಭಾಗದಲ್ಲಿ ವಾಸಿಸುವ ಜನರಿಗೆ ಸಮಾಜಿಕ ಹಾಗೂ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಿಲು ಸಹಕಾರಿಯಾಗಲಿದೆ. ಈ ಭಾಗವು ಸಮುದ್ರದ ಉಬ್ಬರ ಇಳಿತಗಳ ಪ್ರಭಾವಕ್ಕೆ ಒಳಗಾಗುವ ಪ್ರದೇಶವಾಗಿದ್ದು ಸಮುದ್ರದ ಉಪ್ಪು ನೀರು ಪ್ರಸ್ತಾವಿತ ಕಾಮಗಾರಿ ನಿವೇಶನದಿಂದ ಸುಮಾರು 12 ಕಿ.ಮೀ ಮೇಲ್ಛಾತ್ರದವರೆಗೆ ಪ್ರವೇಶಿಸಿ, ಸುತ್ತಮುತ್ತಲಿನ ಅಂತರ್ಜಲವು ಲವಣಾಂಶದಿಂದ ಕೂಡಿರುತ್ತದೆ. ಪ್ರಸ್ತಾವಿತ ಪ್ರದೇಶದಲ್ಲಿ ನೇತ್ರವತಿ ನದಿಗೆ ಅಣೆಕಟ್ಟು ನಿರ್ಮಾಣವಾದಾಗ ಉಪ್ಪು ನೀರು ಮೇಲ್ಭಾಗಕ್ಕೆ ನುಗ್ಗುವುದನ್ನು ತಡೆಯುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಸರಕಾರ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಗೋಕುಲ್ ದಾಸ್, ಗುತ್ತಿಗೆದಾರ ಜಿ. ಶಂಕರ್ ಮತ್ತಿತರರು ಉಪಸ್ಥಿತರಿದ್ದರು.