ಮಂಗಳೂರು, ನ. 25 (DaijiworldNews/MB) : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ಇಂದು 73 ನೇ ವರ್ಷದ ಜನ್ಮದಿನದ ಸಂಭ್ರಮ. ಧರ್ಮಸ್ಥಳ ಭಕ್ತವೃಂದದಿಂದ ಹೆಗ್ಗಡೆ ಜನ್ಮಪ್ರಯುಕ್ತ ಹಿನ್ನಲೆ ಬಡಕುಟುಂಬಗಳಿಗೆ ಸಹಾಯ ಮಾಡುವ ಸಲುವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ವಾತ್ಸಲ್ಯ ಯೋಜನೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನದ ಮುಂಭಾಗದಿಂದ ಚಾಲನೆ ನೀಡಲಾಗಿದೆ.

ಒಂದು ಕೋಟಿ ರೂ ವೆಚ್ಚದಲ್ಲಿ 7300 ಕುಟುಂಬಗಳಿಗೆ ಸಹಾಯಹಸ್ತ ಚಾಚಲಾಗಿದ್ದು 7 ಟ್ರಕ್ಕುಗಳ ಮೂಲಕ ಶ್ರೀ ಕ್ಷೇತ್ರದಿಂದ ವಾತ್ಸಲ್ಯ ಯೋಜನೆ ಕಿಟ್ ವಿತರಿಸಲಾಗುತ್ತಿದೆ. ರಾಜ್ಯದ್ಯಾಂತ ಗುರುತಿಸಿರುವ ಬಡಕುಟುಂಬಗಳಿಗೆ ಈ ಕಿಟ್ಗಳನ್ನು ನೀಡಲಾಗುತ್ತದೆ.
ಈ ಸಂದರ್ಭದಲ್ಲಿ ದೇಶದಲ್ಲಿ ಕೊರೊನಾ ಲಸಿಕೆ ಹಂಚಿಕೆ ಸಿದ್ಧತೆ ವಿಚಾರವಾಗಿ ಮಾತನಾಡಿದ ವೀರೇಂದ್ರ ಹೆಗ್ಗಡೆಯವರು, ''ಲಸಿಕೆ ಬಂದರೂ ನಮ್ಮ ಜಾಗೃತಿಯಲ್ಲಿ ನಾವಿರಬೇಕು. ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು'' ಎಂದು ತಿಳಿಸಿದರು.
''ಕೊರೊನಾವನ್ನು ಸಾಮಾನ್ಯ ಜ್ವರವೆಂದು ಯಾರೂ ಕೂಡಾ ಭಾವಿಸಿಕೊಳ್ಳಬೇಡಿ. ಕೊರೊನಾ ಬಂದರೆ ಏನು ಆಗಲಾರದು ಎಂಬ ಅಹಂಕಾರದ ವರ್ತನೆಯೂ ಬೇಡ. ಜನರು ಸ್ವಯಂ ಜಾಗೃತೆ ಮಾಡಿ ಎಲ್ಲರನ್ನೂ ರಕ್ಷಿಸಬೇಕು'' ಎಂದು ಮನವಿ ಮಾಡಿದರು.