ಮಂಗಳೂರು, ಜೂ 07: ಒಂಭತ್ತನೇ ತರಗತಿಯ ಪಠ್ಯಪುಸ್ತಕದಲ್ಲಿ ಎಳೆಯ ಮನಸ್ಸುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಪಠ್ಯಗಳನ್ನು ನೀಡುವ ಮೂಲಕ ಕೋಮು ಸಾಮರಸ್ಯಕ್ಕೆ ಬದಲು ಕೋಮು ದ್ವೇಷ ಉಂಟು ಮಾಡುವ ಪ್ರಯತ್ನ 'ರಾಜ್ಯ ಪಠ್ಯಪುಸ್ತಕ ರಚನಾ ಸಮಿತಿ ಹಾಗೂ ಪಠ್ಯ ಪರಿಷ್ಕರಣಾ ಸಮಿತಿ' ನಡೆಸಿವೆ ಎಂಬ ಆರೋಪ ವ್ಯಕ್ತವಾಗಿದ್ದು ಈ ಹಿನ್ನಲೆಯಲ್ಲಿ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳದ ಕಾರ್ಯಕರ್ತರು ಮಂಗಳೂರಿನ ಜ್ಯೋತಿ ವೃತ್ತದ ಬಳಿ ಇರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಜೂ 7ರ ಗುರುವಾರ ಪ್ರತಿಭಟನೆ ನಡೆಸಿದರು.
ಹಿಂದೂ ವಿರೋಧಿ ಸರಕಾರ ಮಕ್ಕಳಲ್ಲಿ ಮನಸ್ಸಿನಲ್ಲಿ ಕೆಲವು ಧರ್ಮಗಳ ವೈಭವೀಕರಣದ ಷಡ್ಯಂತ್ರವನ್ನು ರೂಪಿಸಿದ್ದು, ಶಾಲಾ ವಿದ್ಯಾರ್ಥಿಗಳನ್ನು ಧರ್ಮದ ವಿಚಾರಕ್ಕೆ ಬಳಸಲಾಗುತ್ತಿದ್ದು, ಕ್ರೈಸ್ತರ ಮತ್ತು ಮುಸಲ್ಮಾನರ ಓಲೈಕೆ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. 9ನೇ ತರಗತಿಯ ಪಠ್ಯ ಪುಸ್ತಕದಲ್ಲಿ ಈ ವಿವಾದವನ್ನು ಹುಟ್ಟುಹಾಕಲಾಗಿದ್ದು ಧರ್ಮದ ಬಗ್ಗೆ ಹೆಚ್ಚಿನ ಮಾಹಿತಿ ಸಿಗಬೇಕಾದರೆ ಚರ್ಚಿಗೆ ಹೋಗಿ ಅಥವಾ ಮಸೀದಿಗೆ ಹೋಗಿ ಎಂದು ಹೇಳುವ ಶಿಕ್ಷಣ ಇಲಾಖೆ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
9ನೇ ತರಗತಿಯ ಕನ್ನಡ ಮಾಧ್ಯಮದ ಸಮಾಜ ವಿಜ್ಞಾನ ಹಾಗೂ ಆಂಗ್ಲ ಮಾಧ್ಯಮದ ಸೋಶಿಯಲ್ ಸಯನ್ಸ್ ಪರಿಷ್ಕೃತ ಪುಸ್ತಕದ ಪಠ್ಯ ಭಾಗ–1 ರ ಮೊದಲ ಅಧ್ಯಾಯದಲ್ಲಿ ಕ್ರೈಸ್ತ ಧರ್ಮ ಹಾಗೂ ಇಸ್ಲಾಂ ಧರ್ಮಗಳ ಬಗೆಗೆ ಮಾಹಿತಿ ನೀಡಿರುವುದು ಹಾಗೂ ಪಾಠದ ನಂತರದ ಪುಟದಲ್ಲಿ ಮಕ್ಕಳು ಚರ್ಚ್ ಹಾಗೂ ಮಸೀದಿಗೆ ತೆರಳಿ ಅಲ್ಲಿ ನಡೆಯುವ ವಿಧಿವಿಧಾನಗಳನ್ನು ಅಭ್ಯಾಸಿಸುವಂತೆ ತಿಳಿಸಲಾಗಿರುವುದು ಇವರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರತಿಭಟನೆಯಲ್ಲಿ ವಿಶ್ವಹಿಂದೂ ಪರಿಷತ್ನ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್, ಪ್ರವೀಣ್ ಕುತ್ತಾರ್, ಆಶಾ ಜಗದೀಶ್ ಮೊದಲಾದವರಿದ್ದರು.