ಕಾಸರಗೋಡು, ನ.25 (DaijiworldNews/PY): ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿ ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎರಡನೇ ಆರೋಪಿಯಾಗಿರುವ ಮಂಜೇಶ್ವರ ಶಾಸಕ ಎಂ. ಸಿ ಕಮರುದ್ದೀನ್ ಅವರನ್ನು ಜೈಲಿನಲ್ಲೇ ವಿಚಾರಣೆ ನಡೆಸಲು ತನಿಖಾ ತಂಡಕ್ಕೆ ನ್ಯಾಯಾಲಯ ಅನುಮತಿ ನೀಡಿದೆ.

ಕಸ್ಟಡಿಗೆ ಒಪ್ಪಿಸುವಂತೆ ತನಿಖಾ ತಂಡ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಹೊಸದುರ್ಗ ನ್ಯಾಯಾಲಯ ಜೈಲಿನಲ್ಲೇ ವಿಚಾರಣೆ ನಡೆಸುವಂತೆ ತಿಳಿಸಿದೆ.
ಕಸ್ಟಡಿಗೆ ಒಪ್ಪಿಸಿದ್ದಲ್ಲಿ ಕಮರುದ್ದೀನ್ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ. ಈ ಹಿಂದೆ ಎರಡು ಬಾರಿ ಕಸ್ಟಡಿಗೆ ಒಪ್ಪಿಸಲಾಗಿತ್ತು. ಇದರಿಂದ ಕಸ್ಟಡಿಗೆ ಒಪ್ಪಿಸದಂತೆ ಆರೋಪಿ ಪರ ವಕೀಲರು ವಾದಿಸಿದರು. ಇದಕ್ಕೆ ಮೊದಲು ಕಮರುದ್ದೀನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಈ ನಡುವೆ ಕಮರುದ್ದೀನ್ ಅವರನ್ನು ಕಾಞಂಗಾಡ್ ಜೈಲಿನಿಂದ ಕಣ್ಣೂರು ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ. ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದ ಕಮರುದ್ದೀನ್ ಅವರನ್ನು ಬಿಡುಗಡೆಗೊಳಿಸಲಾಗಿದ್ದು, ಬಳಿಕ ಕಾಞಂಗಾಡ್ ಜೈಲಿಗೆ ಕರೆ ತರಲಾಗಿತ್ತು. ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ 130 ಪ್ರಕರಣಗಳನ್ನು ದಾಖಲಿಸಲಾಗಿದೆ. ಪ್ರಕರಣದ ಪ್ರಥಮ ಆರೋಪಿ ಟಿ.ಕೆ ಪೂಕೋಯ ತಂಘಳ್ ಇನ್ನೂ ತಲೆಮರೆಸಿಕೊಂಡಿದ್ದಾನೆ.