ಕಾಸರಗೋಡು, ನ.25 (DaijiworldNews/PY): ಕೊರೊನಾದ ಎರಡನೇ ಅಲೆ ಸಾಧ್ಯತೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಲು ಜಿಲ್ಲಾ ಕೊರೊನಾ ಸಲಹಾ ಸಮಿತಿ ತೀರ್ಮಾನಿಸಿದೆ.

ಜಿಲ್ಲಾಧಿಕಾರಿ ಡಾ ಡಿ. ಸಜಿತ್ ಬಾಬು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಹೋಟೆಲ್ಗಳು ರಾತ್ರಿ 9 ಗಂಟೆ ತನಕ ತೆರೆಯಲು ಅವಕಾಶ ನೀಡಲಾಗಿದೆ. ರಾತ್ರಿ 11 ಗಂಟೆಯ ತನಕ ಅನುಮತಿ ನೀಡುವಂತೆ ಹೋಟೆಲ್ ಮಾಲಕರ ಸಂಘದ ಮನವಿಗೆ ಉತ್ತರಿಸಿದ ಜಿಲ್ಲಾಧಿಕಾರಿ, "ಕೊರೊನಾ ನಿಯಂತ್ರಣ ದೃಷ್ಟಿಯಿಂದ ಅವಧಿ ವಿಸ್ತರಣೆ ಸಾಧ್ಯ ಇಲ್ಲ" ಎಂದರು.
"ರಸ್ತೆ ಬದಿಯ ತಟ್ಟಿ ಹೋಟೆಲ್ಗಳಲ್ಲಿ ಪಾರ್ಸೆಲ್ಗೆ ಮಾತ್ರ ಅವಕಾಶ. ತಟ್ಟಿ ಹೋಟೆಲ್ಗಳಲ್ಲಿ ಕುಳಿತು ಆಹಾರ ಸೇವಿಸುವಂತಿಲ್ಲ. ಕಾನೂನು ಉಲ್ಲಂಘಿಸಿ ಕಾರ್ಯಾಚರಿಸುವ ಇಂತಹ ಹೋಟೆಲ್ಗಳನ್ನು ತೆರವುಗೊಳಿಸಲಾಗುವುದು" ಎಂದು ಹೇಳಿದರು.
"ಅಂಗಡಿ-ಮುಂಗಟ್ಟುಗಳಲ್ಲಿ ಮಾಲಕರು, ನೌಕರರು ಮಾಸ್ಕ್ ಗ್ಲೌಸ್ ಧರಿಸಬೇಕು. ತಪಾಸಣೆಗೆ ವಿಶೇಷ ತಂಡ ರಚಿಸಲಾಗುವುದು. ವಲಸೆ ಕಾರ್ಮಿಕರಿಗೆ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಲಾಗುವುದು. ಕ್ವಾರಂಟೈನ್ ಕಾಲಾವಧಿ ಮುಗಿದ ಬಳಿಕವಷ್ಟೇ ಹೊರ ಬರಲು ಅನುಮತಿ ನೀಡಲಾಗುವುದು . ಈ ಬಗ್ಗೆ ಕಾರ್ಮಿಕ ಆಯುಕ್ತರಿಗೆ ಜವಾಬ್ದಾರಿ ನೀಡಲಾಗಿದ್ದು, ಕೈಗೊಂಡ ಕ್ರಮಗಳ ಕುರಿತು ಕಾರ್ಮಿಕ ಆಯುಕ್ತರು ಒಂದು ವಾರದೊಳಗೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಬೇಕು. ಚಾಲನಾ ಲೈಸನ್ಸ್ಗಾಗಿ ಬರುವವರು ಹಾಗೂ ಅವರ ಜೊತೆ ಬರುವವರೂ ಆಂಟಿಜನ್ ಟೆಸ್ಟ್ ನಡೆಸಬೇಕು. ಟೆಸ್ಟ್ ನಡೆಸುವ ಮೈದಾನ ಸಮೀಪ ಉಚಿತ ಆಂಟಿಜನ್ ಟೆಸ್ಟ್ ನಡೆಸುವ ವ್ಯವಸ್ಥೆ ಮಾಡಲಾಗುವುದು" ಎಂದು ತಿಳಿಸಿದರು.
ಕುಟುಂಬಶ್ರೀ ನೇತೃತ್ವದ ತರಬೇತಿ ಕೇಂದ್ರಗಳು ಶೇ.50ರಷ್ಟು ಮಂದಿಗೆ ತರಬೇತಿ ಪುನರಾರಂಭಿಸಲು ಅನುಮತಿ ನೀಡಲಾಗಿದೆ. ತರಕಾರಿ-ಹಣ್ಣು ಹಂಪಲು ಅಂಗಡಿಗಳ ನೌಕರರು ಆಂಟಿಜನ್ ಟೆಸ್ಟ್ ನಡೆಸುವಂತೆ ಸಭೆಯಲ್ಲಿ ತಿಳಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾ, ಆರೋಗ್ಯಾಧಿಕಾರಿ ಡಾ.ಎ.ವಿ ರಾಮದಾಸ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಉಪಜಿಲ್ಲಾಧಿಕಾರಿ ಡಿ.ಆರ್ ಮೇಘಶ್ರೀ, ಕಂದಾಯ ಅಧಿಕಾರಿ ಶುಕೂರ್ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.