ಮಂಗಳೂರು, ನ.25 (DaijiworldNews/PY): "ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಹಾಗೂ ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗಗಳ ಕೌಶಲ್ಯ ಅಭಿವೃದ್ಧಿ ಅವಶ್ಯಕವಾಗಿದೆ" ಎಂದು ಮಂಗಳೂರು ದಕ್ಷಿಣ ವಿಧಾನಸಭಾಕ್ಷೇತ್ರ ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.

ಅವರು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಬೆಂಗಳೂರು, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್), ಧಾರವಾಡ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಮಂಗಳೂರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಧ್ಯಯನ ಮತ್ತುಅಭಿವೃದ್ಧಿ ಟ್ರಸ್ಟ್, ಮಂಗಳೂರು ಹಾಗೂ ಸರಕಾರಿ ಮಹಿಳಾ ಕೈಗಾರಿಕಾ ಸಂಸ್ಥೆ, ಕದ್ರಿ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ 30 ದಿನಗಳ "ಕಾಸ್ಮಿಟೋಲಜಿ ಹಾಗೂ ಬ್ಯೂಟಿಷಿಯನ್" ಕೌಶಲ್ಯಾಭಿವೃದ್ಧಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
"ಆರ್ಥಿಕವಾಗಿ ಹಿಂದುಳಿದ ಹಾಗೂ ಕೌಶಲ್ಯಾಭಿವೃದ್ಧಿ ಆಕಾಂಕ್ಷಿಗಳಿಗೆ ಎಲ್ಲಾ ಕ್ಷೇತ್ರದಲ್ಲಿ ನಿರಂತರ ತರಬೇತಿಯನ್ನುಇಲಾಖೆಯು ನೀಡುತ್ತಿದ್ದು ಆಸಕ್ತರು ಮುಂದೆ ಬರಬೇಕು" ಎಂದು ಕರೆ ನೀಡಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಧ್ಯಯನ ಮತ್ತುಅಭಿವೃದ್ಧಿ ಟ್ರಸ್ಟ್, ಮಂಗಳೂರಿನ ಅಧ್ಯಕ್ಷ ಮೋಹನಾಂಗಯ್ಯ ಸ್ವಾಮಿ ,ಜಂಟಿ ನಿರ್ದೇಶಕ ಅರವಿಂದ ಡಿ ಬಾಳೇರಿಯ, ಕೈಗಾರಿಕಾ ತರಬೇತು ಸಂಸ್ಥೆಗಳ ಪ್ರಾಂಶುಪಾಲ ಬಾಲಕೃಷ್ಣ ಎಂ ಹಾಗೂ ಗಿರಿಧರ್ ಸಾಲ್ಯಾನ್ ಸೂಕ್ತ ಮಾಹಿತಿಗಳನ್ನು ನೀಡಿದರು.
ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯರುಗಳಾದ ಶಕೀಲಾ ಕಾವ, ಭರತ್ ಸೂಟರ್ಪೇಟೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಲೆಕ್ಕಾಧಿಕಾರಿ ರಾಘವೇಂದ್ರ ಎಂ, ಅಮೂಲ್ಯ ಸಾಕ್ಷರತಾ ಆರ್ಥಿಕ ಸಮಾಲೋಚನಾ ಟ್ರಸ್ಟ್ನ ಹಿರಿಯ ಸಮಾಲೋಚಕ ಸತೀಶ್ ಅತ್ತಾವರ ವೇದಿಕೆಯಲ್ಲಿ ಉಪಸ್ಥಿತರಿದ್ದರು.