ಬ್ರಹ್ಮಾವರ, ನ.26(DaijiworldNews/PY): "ರಾಷ್ಟ್ರೀಯ ಹೆದ್ದಾರಿ ಈಗಿನ ಸಮಸ್ಯೆಗೆ ಕಂಟ್ರಾಕ್ಟರ್ ಕಾರಣ, ಕಾಮಗಾರಿ ಮುಗಿಯದೇ ಟೋಲ್ ಸಂಗ್ರಹ ಮಾಡಬಾರದು ಎಂದು ನಾವು ಗಲಾಟೆ ಮಾಡಿದ್ದೆವು. ಆದರೆ, ಪೋಲಿಸ್ ಫೋರ್ಸ್ ಮತ್ತು ರಾಜಕೀಯ ನಾಯಕರ ಪ್ರಭಾವ ಬಳಸಿ ಟೋಲ್ ಹಾಕಿಸಿದ್ದಾರೆ" ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದರು.

ಬ್ರಹ್ಮಾವರದಲ್ಲಿ ರಸ್ತೆ ಅಪಘಾತ ತಡೆಯ ಬಗ್ಗೆ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ರೋಡ್ ಕಂಪ್ಲಿಟ್ ಆಗದೇ ಎಲ್ಲರಿಂದಲೂ ಟೋಲ್ ಸಂಗ್ರಹ ಮಾಡುತಿದ್ದಾರೆ. ಸರಕಾರಿ ಅಧಿಕಾರಿಗಳನ್ನು ಕೂಡಾ ಇವರು ಬಿಡುವುದಿಲ್ಲ. ಸಂಸ್ಥೆಯವರ ವರ್ತನೆ ಅತಿರೇಕಕ್ಕೆ ಹೋಗಿದೆ. ಕರಾವಳಿ ಜಂಕ್ಷನ್ ನಲ್ಲಿ ಅಂಡರ್ ಪಾಸ್ ಆಗಿ ಎರಡು ವರ್ಷ ಅಗಿದೆ ಅದರೆ ಇದುವರೆಗೆ ಅಲ್ಲಿ ಲೈಟ್ ಅನ್ ಮಾಡಿಸಿಲ್ಲ. ಇದು ಇನ್ನು ಜನ ಪ್ರತಿರೋಧ ಒಡ್ಡಿ ಮುಂದೊಂದು ದಿನ ಟೋಲ್ ಬಂದ್ ಮಾಡಿಸುವ ದಿನ ಬಂದರೂ ಬರಬಹುದು. ತಕ್ಷಣ ಕೆಲಸ ಪೂರ್ಣ ಮಾಡದೇ ಇದ್ದಲ್ಲಿ ಟೊಲ್ ಅನ್ನು ಅನಿವಾರ್ಯವಾಗಿ ಬಂದ್ ಮಾಡಬೇಕಾದಿತು" ಎಂದು ತಿಳಿಸಿದರು.
"ಈ ಮೊದಲು ನಡೆದ ಸಂಸದರ ಸಭೆ, ಜಿಲ್ಲಾ ಪಂಚಾಯತ್ ಸಭೆಗಳಲ್ಲಿ ಕೂಡಾ ಈ ಕುರಿತಾಗಿ ನಾವು ಕಂಪನಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದೆವೆ ಆದರೆ ಜನಪ್ರತಿನಿಧಿಗಳ ಮಾತಿಗೆ ಕೂಡಾ ಬೆಲೆ ಇಲ್ಲದಾಗಿದೆ. ಮಾತಾಡಿದರೆ ಅವರು ನಮಗೆ ಮಾಡಿದ ಒಪ್ಪಂದದ ಪ್ರಕಾರ ನಾವು ನಡೆದುಕೊಂಡಿದ್ದೇವೆ ಎಂದು ಅಗ್ರಿಮೆಂಟ್ ಅನ್ನು ತೋರಿಸುತ್ತಾರೆ. ಯಾವುದೇ ಸಭೆಗೂ ಉನ್ನತ ಮಟ್ಟದ ಅಧಿಕಾರಿಗಳು ಬಾರದೇ ಇತರರನ್ನು ಕಳುಹಿಸುತ್ತಾರೆ, ಸಭೆಗೆ ಬಂದವರಿಗೆ ಇಂಗ್ಲಿಷ್ ಬಿಟ್ಟು ಬೇರೆ ಭಾಷೆಯಲ್ಲಿ ಹೇಳಿದರೆ ಅವರಿಗೆ ಅರ್ಥವಾಗುವುದಿಲ್ಲ" ಎಂದು ಹೇಳಿದರು.
ಜನರು ಶಾಸಕ, ಸಂಸದರು ಎನೂ ಮಾತಾಡಲ್ಲ ಎಂದೆಣಿಸುತ್ತಾರೆ. ನಾವು ಮಾತನಾಡಿ, ಗಲಾಟೆ ಕೂಡಾ ಮಾಡಿದ್ದೆವೆ. ಆದರೆ, ಇದುವರೆಗೆ ಕಾಮಗಾರಿ ಸಂಪೂರ್ಣವಾಗಿಲ್ಲ. ಜಿಲ್ಲಾಡಳಿತ ಟೋಲ್ ಗೇಟ್ಗೆ ನೀಡಿದ ಭದ್ರತೆಯನ್ನು ಹಿಂಪಡೆದರೆ ಇಂದಿಗೂ ಜನರು ಟೋಲ್ ನೀಡದೆ ಸಂಚರಿಸಲು ತಯಾರಿದ್ದಾರೆ" ಎಂದರು.