ಮಂಗಳೂರು, ನ. 26 (DaijiworldNews/MB) : ಸಚಿವ ಸಂಪುಟ ವಿಸ್ತರಣೆಯ ನಿರೀಕ್ಷೆಯಲ್ಲಿ ತೆರೆಮರೆಯಲ್ಲಿ ಚಟುವಟಿಕೆಗಳು ನಡೆಯುತ್ತಿದೆ. ಕರಾವಳಿಯ ಶಾಸಕರು ಸಚಿವ ಸ್ಥಾನ ಪಡೆಯುವ ಸಾಧ್ಯೆತಯ ಬಗ್ಗೆ ಈಗ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಏತನ್ಮಧ್ಯೆ ದಕ್ಷಿಣ ಕನ್ನಡ ಮತ್ತು ಉಡುಪಿಯ ಉಭಯ ಜಿಲ್ಲೆಗಳಿಂದ ಓರ್ವರ ಮಂತ್ರಿಗಿರಿಗೆ ಕುತ್ತು ಉಂಟಾಗುವ ಸಾಧ್ಯೆತೆಯಿದೆ. ಹಾಗೆಯೇ ಸಚಿವ ಸಂಪುಟಕ್ಕೆ ಇಬ್ಬರನ್ನು ಸೇರಿಸಿಕೊಳ್ಳುವ ಸಾಧ್ಯತೆ ಅಧಿಕವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ, ಮೀನುಗಾರಿಕೆ ಮತ್ತು ಮುಜರಾಯಿ ಇಲಾಖೆ ಸಚಿವರಾಗಿರುವ ಶ್ರೀನಿವಾಸ್ ಪೂಜಾರಿ ಅವರಿಗೆ ಶಾಸಕಾಂಗದ ಅಧ್ಯಕ್ಷರನ್ನಾಗಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಪರಿಷತ್ತಿನಲ್ಲಿ 31 ಸದಸ್ಯರನ್ನು ಹೊಂದಿರುವ ಬಿಜೆಪಿ, ಹಾಲಿ ಅಧ್ಯಕ್ಷ ಪ್ರತಾಪಚಂದ್ರ ಶೆಟ್ಟಿಯನ್ನು ಪರಿಷತ್ತಿನಲ್ಲಿ 13 ಸದಸ್ಯರನ್ನು ಹೊಂದಿರುವ ಜೆಡಿಎಸ್ ಬೆಂಬಲದೊಂದಿಗೆ ಪದಚ್ಯುತಗೊಳಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ.
ಬಿ ಎಲ್ ಸಂತೋಷ್ ಭೇಟಿ
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರು ನಗರದ ಬಿಜೆಪಿ ಕಚೇರಿಗೆ ಅಚ್ಚರಿಯ ಭೇಟಿ ನೀಡಿ ಅಲ್ಲಿ ಕೆಲವು ನಾಯಕರೊಂದಿಗೆ ಚರ್ಚೆ ನಡೆಸಿದರು. ಈ ಬೆಳವಣಿಗೆಯು ಬಿಜೆಪಿ ರಾಜಕೀಯದಲ್ಲಿ ಹೆಚ್ಚಿನ ಆಸಕ್ತಿಯನ್ನು ಹುಟ್ಟುಹಾಕಿದೆ. ಉಡುಪಿಗೆ ಭೇಟಿ ನೀಡಿದ್ದ ಸಂತೋಷ್ ಅವರು, ಮಂಗಳೂರು ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಮರಳುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿದೆ. ಹೀಗೆ ದಾರಿ ಮಧ್ಯೆ ಅವರು ಪಕ್ಷದ ಕಚೇರಿಗೆ ದಿಢೀರನ್ನೇ ಭೇಟಿ ನೀಡಿದ್ದಾರೆ.
ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆ ಮತ್ತು ಸಚಿವಾಲಯದ ವಿಸ್ತರಣೆಯ ಬಗ್ಗೆ ಸಂತೋಷ್ ಅವರು, ಪಕ್ಷದ ಮುಖಂಡರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.