ಮಂಗಳೂರು, ನ.26(DaijiworldNews/PY): "ಸರ್ಕಾರ ಹೊರಡಿಸಿರುವ ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು" ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ಹೇಳಿದ್ದಾರೆ.

ನ.25ರ ಬುಧವಾರ ನಗರದಲ್ಲಿ ನಡೆದ ಪದವಿ ಪ್ರಾಂಶುಪಾಲರು, ಉಪ ವಿಭಾಗೀಯ ಅಧಿಕಾರಿ, ತಹಶೀಲ್ದಾರ್ ಹಾಗೂ ಆರೋಗ್ಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, "ಯುಜಿಸಿ ಪ್ರಕಟಿಸಿರುವ ಮಾರ್ಗಸೂಚಿಗಳ ಪ್ರಕಾರ, ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಪುನರಾರಂಭಿಸುವ ಬಗ್ಗೆ ಎಸ್ಒಪಿ ಹೊರಡಿಸಿದೆ" ಎಂದು ತಿಳಿಸಿದ್ದಾರೆ.
"ಭೌತಿಕ ತರಗತಿಗಳಿಗೆ ಹಾಜರಾಗುವಂತ ವಿದ್ಯಾರ್ಥಿಗಳು ಮೂರು ದಿನಗಳ ಮುಂಚಿತವಾಗಿ ಆರ್ಟಿಸಿಪಿಆರ್ ಪರೀಕ್ಷೆಯನ್ನು ಮಾಡಿಸಿಕೊಂಡು ನೆಗೆಟಿವ್ ವರದಿಗಳಿದ್ದರೆ ಮಾತ್ರ ತರಗತಿಗಳಿಗೆ ಪ್ರವೇಶ ನೀಡಲು ಅವಕಾಶ ನೀಡಬೇಕು" ಎಂದಿದ್ದಾರೆ.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಚಂದ್ರ ಬಾಯರಿ ಮಾತನಾಡಿ, "ಕಾಲೇಜು ಉಪನ್ಯಾಸಕರು, ಕಚೇರಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸೇರಿದಂತೆ 19,402 ಜನರ ಮೇಲೆ ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದ್ದು, ಅವರಲ್ಲಿ 45 ಮಂದಿಗೆ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಹತ್ತಿರದ ಆರೋಗ್ಯ ಕೇಂದ್ರದ ವೈದ್ಯಕೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರಲು ಮತ್ತು ವಿದ್ಯಾರ್ಥಿಗಳಿಗೆ ಕೊರೊನಾ ಪರೀಕ್ಷೆಗಳಿಗೆ ವ್ಯವಸ್ಥೆ ಮಾಡಬೇಕು" ಎಂದು ಪ್ರಾಂಶುಪಾಲರಿಗೆ ಅವರು ಸಲಹೆ ನೀಡಿದರು.
ಸಭೆಯಲ್ಲಿ, ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ, ಸಹಾಯಕ ಆಯುಕ್ತ ಮದನ್ ಕುಮಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.