ಮಂಗಳೂರು,ಸೆ.04: ಬಿಜೆಪಿ ಯುವ ಮೋರ್ಚಾವು ಸೆ.7ರಂದು ಮಂಗಳೂರಿನಲ್ಲಿ ನಡೆಸಲು ಉದ್ದೇಶಿಸಿರುವ ಮಂಗಳೂರು ಚಲೋ ರ್ಯಾಲಿಯನ್ನು ನಾವು ವಿರೋಧಿಸುವುದಾಗಿ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿಯವರಿಗೆ ರ್ಯಾಲಿ ನಡೆಸುವುದಕ್ಕೆ ನೈತಿಕ ಹಕ್ಕಿಲ್ಲ, ಹಿಂದೂ ಸಂಘಟನೆಗಳ ರ್ಯಾಲಿಗೆ ಅವಕಾಶ ನೀಡಬಾರದೆಂದು ಹೇಳಿದರು. ಮತೀಯ ಸಂಘಟನೆಗಳ ವಿರುದ್ಧ ನಾವು ಹಲವು ಬಾರಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಪಿಎಫ್ಐ ಸಂಘಟನೆಯನ್ನು ನಿಷೇಧಿಸಲು, ಸಿಬಿಐ ತನಿಖೆಗೆ, ರಮಾನಾಥ ರೈ ರಾಜೀನಾಮೆ ನೀಡಲು ಇವರು ಆಗ್ರಹಿಸುತ್ತಿದ್ದಾರೆ.ಮತೀಯ ಸಂಘಟನೆಗಳನ್ನು ನಿಷೇಧಿಸಿ ಎಂದು ಹೇಳುವುದಕ್ಕೆ ಇವರಿಗೆ ನೈತಿಕತೆ ಇಲ್ಲ. ಇವರ ಪರಿವಾರ ಸಂಘಟನೆಗಳೇ ಮತೀಯ ಸಂಘಟನೆಗಳಾಗಿವೆ ಎಂದು ಅವರು ದೂರಿದರು.
ಜಿಲ್ಲೆಯಲ್ಲೆ ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ಇಂತಹ ಮತೀಯವಾದಿಗಳಿಗೆ ಅವಕಾಶ ನೀಡಬಾರದು. ಅಭಿವೃದ್ಧಿಯತ್ತ ಸಾಗುತ್ತಿರುವ ಜಿಲ್ಲೆಗೆ ಮತೀಯ ಸಂಘರ್ಷಗಳು ಬಾಧಕವಾಗುತ್ತಿದೆ. ಈ ರ್ಯಾಲಿ ನಡೆದರೆ ಜಿಲ್ಲೆಯಲ್ಲಿ ಮತ್ತೊಮ್ಮೆ ಶಾಂತಿ ಕದಡಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೇಸ್ ಯುವ ನಾಯಕರಾದ ಸುಹೈಲ್ ಕಂದಕ್, ಗಿರೀಶ್ ಆಳ್ವ, ಲುಕ್ಮಾನ್, ಪ್ರಸಾದ್ ಮಲ್ಲಿ ಮತ್ತಿತರರು ಉಪಸ್ಥಿತರಿದ್ದರು.