ಬೆಂಗಳೂರು, 07 : ತಮ್ಮ ಅಸಮಾಧಾನವನ್ನು ಹೊರ ಹಾಕಿ ಒಂದು ವೇಳೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ, ಮುಂದೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ಹೈಕಮಾಂಡ್ ಅಸಮಾಧಾನಗೊಂಡಿರುವ ಶಾಸಕರಿಗೆ ಖಡಕ್ ಸೂಚನೆ ನೀಡಿದೆ.
ಸಮ್ಮಿಶ್ರ ಸಂಪುಟದಲ್ಲಿ ಸಚಿವ ಸ್ಥಾನ ಲಭಿಸದೆ ಅಸಮಾಧಾನಗೊಂಡಿರುವ ಹಲವು ಕಾಂಗ್ರೆಸ್ ಶಾಸಕರು ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ಸರಣಿ ಸಭೆಗಳನ್ನು ನಡೆಸಿ ಚರ್ಚೆ ಮಾಡಿರುವ ಹಿನ್ನಲೆಯಲ್ಲಿ ಈ ರೀತಿ ಖಡಕ್ ಸೂಚನೆ ನೀಡಿದೆ. ಸಂಪುಟದಲ್ಲಿ ಇನ್ನೂ ಕೂಡಾ 6 ಸ್ಥಾನಗಳು ಭರ್ತಿಯಾಗದೆ ಇರೋದ್ರಿಂದ ಎಲ್ಲರು ತಾಳ್ಮೆಯಿಂದರಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಮನವಿ ಮಾಡಿದ್ದಾರೆ. ಅಲ್ಲದೆ 2 ವರ್ಷದ ಬಳಿಕ ಸಚಿವ ಸಂಪುಟವನ್ನು ಮತ್ತೆ ಬದಲಾವಣೆ ಮಾಡುವುದಾಗಿ ಹೇಳಿದ್ದು, ಸಂಪುಟದಲ್ಲಿ ಅವಕಾಶ ವಂಚಿತ ಶಾಸಕರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನ ಕಲ್ಪಿಸುವುದಾಗಿ ತಿಳಿಸಿದ್ದಾರೆ
ಮಾಜಿ ಸಚಿವ ಎಂ.ಬಿ.ಪಾಟೀಲ್ ನಿವಾಸದಲ್ಲಿ ಸಭೆ ನಡೆಸಲಾಗಿದ್ದು, ಸಚಿವ ಸ್ಥಾನ ವಂಚಿತರಾದ ಸತೀಶ್ ಜಾರಕೀಹೊಳಿ, ಈಶ್ವರ್ ಖಂಡ್ರೆ, ಎಚ್.ಕೆ .ಪಾಟೀಲ್, ಬಿ.ಸಿ.ಪಾಟೀಲ್, ರೋಷನ್ ಬೇಗ್, ಹ್ಯಾರಿಸ್, ನಾರಾಯಣ ಮೂರ್ತಿ, ಎಚ್.ಆಂಜನೇಯ, ರಹೀಂ ಖಾನ್ ,ರಘುಮೂರ್ತಿ ಡಾ.ಸುಧಾಕರ್, ಎಂಟಿಬಿ ನಾಗರಾಜ್ ಹೀಗೆ 16 ಜನ ಸೇರಿ ಅವರು ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ.