ಉಡುಪಿ, ನ. 26 (DaijiworldNews/MB) : ತಾಯಿಯಿಂದ ತಿರಸ್ಕರಿಸಲ್ಪಟ್ಟ ಹಾಗೂ ಕಸದ ತೊಟ್ಟಿಯಲ್ಲಿ ಕರುಣಾಜನಕ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮಗುವಿಗೆ ಸಾಂಪ್ರದಾಯಿಕ ನಾಮಕರಣ ಶಾಸ್ತ್ರ ನಡೆಸಲಾಯಿತು.

ಆಗಸ್ಟ್ 10 ರ ಬೆಳಿಗ್ಗೆ ಇಲ್ಲಿನ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಸಮೀಪವಿರುವ ಹೋಟೆಲ್ನ ಕಸದ ತೊಟ್ಟಿಯಿಂದ ಮಗು ಪತ್ತೆಯಾಗಿತ್ತು. ಇದನ್ನು ರಕ್ಷಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಈಗ ಮಗುವಿಗೆ ನಾಲ್ಕು ತಿಂಗಳಾಗಿದ್ದು ತೊಟ್ಟಿಲು ಶಾಸ್ತ್ರ ನಡೆಸಲಾಗಿದೆ.
ನ್ಯಾಯಾಧೀಶೆ ಹಾಗೂ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯೆ ಕಾವೇರಿ ಮಗುವಿಗೆ 'ಪ್ರಜ್ವಲ' ಎಂಬ ಹೆಸರನ್ನು ನೀಡಿ ಮಗುವಿನ ಭವಿಷ್ಯ ಪ್ರಜ್ವಲವಾಗಲಿ ಎಂದು ಹಾರೈಸಿದರು.
'ಮಡಿಲ ಬೆಳಗು' ದತ್ತು ಕಾರ್ಯಕ್ರಮ ಮತ್ತು ಮಗುವಿನ ನಾಮಕರಣವನ್ನು ಇಲ್ಲಿನ ಸಂತೇಕಟ್ಟೆಯ ಕೃಷ್ಣಾನುಗ್ರಹ ದತ್ತು ಕೇಂದ್ರದಲ್ಲಿ ನಡೆಸಲಾಯಿತು. ಜಿಲ್ಲಾ ಆರೋಗ್ಯ ಸಂರಕ್ಷಣಾ ಅಧಿಕಾರಿ, ಸದಾನಂದ್ ನಾಯಕ್ ಅಧ್ಯಕ್ಷತೆ ವಹಿಸಿದರು. ಮಹಿಳಾ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ವೈಲೆಟ್ ಫೆಮಿನಾ, ಶ್ರೀಕೃಷ್ಣ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಡಾ.ಉಮೇಶ್ ಪ್ರಭು, ಜಿಲ್ಲಾ ನಗರಿಕ ಸೇವಾ ಸಮಿತಿಯ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಮಕ್ಕಳ ಸಹಾಯವಾಣಿ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ ಉಪಸ್ಥಿತರಿದ್ದರು.
ಕೃಷ್ಣಾನುಗ್ರಹದ ಆಡಳಿತಾಧಿಕಾರಿ ಉದಯಕುಮಾರ್ ಸ್ವಾಗತಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಅಧಿಕಾರಿ ಪ್ರಭಾಕರ್ ಆಚಾರ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಕೃಷ್ಣಾನುಗ್ರಹದ ಸಂಯೋಜಕಿ ಮರೀನಾ ವಂದಿಸಿದರು.