ಉಡುಪಿ, ನ.27 (DaijiworldNews/PY): "ಕರ್ನಾಟಕ ಸರ್ಕಾರ ಲವ್ ಜಿಹಾದ್ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಿದೆ" ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

















ಕೇರಳದ ಹಿಂದೂ ಮಹಿಳೆಯನ್ನು ವರಿಸಿ ಮತಾಂತರ ಮಾಡಿ ಕೈ ಬಿಟ್ಟ ಪ್ರಕರಣದ ಬಗ್ಗೆ ಪ್ರಶ್ನಿಸಿದಾಗ ಉಡುಪಿಯಲ್ಲಿ ಸಂಸದ ನಳಿನ್ ಕುಮಾರ್ ಪ್ರತಿಕ್ರಿಯೆ ನೀಡಿ, "ಇಂತಹ ಸುದ್ದಿಗಳು ದೇಶದ ಬೇರೆ ಬೇರೆ ಕಡೆ ಆಗುತ್ತಿವೆ .ಈಗಾಗಲೆ ಪಾರ್ಟಿ ಮತ್ತು ಕೋರ್ ಕಮಿಟಿಯಲ್ಲಿ ತೀರ್ಮಾನ ಕೈಗೊಂಡಿದ್ದೆವೆ. ಮುಖ್ಯಮಂತ್ರಿಗಳು ಕೂಡಾ ಒಪ್ಪಿಗೆ ನೀಡಿದ್ದಾರೆ. ಕರ್ನಾಟಕದಲ್ಲೂ ಲವ್ ಜಿಹಾದ್ ಬಗ್ಗೆ ನಮ್ಮ ಸರಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು.
ಶುಕ್ರವಾರ ಬೆಳಗ್ಗೆ ಮಂಗಳೂರಿನ ರಸ್ತೆಯೊಂದರಲ್ಲಿ ಉಗ್ರರ ಪರವಾಗಿ ಬರಹ ಪತ್ತೆ ವಿಚಾರದ ಬಗ್ಗೆ ಮಾತನಾಡಿದ ಅವರು, "ರಾಷ್ಟ್ರ ವಿರೋಧಿ ಘೋಷಣೆ, ರಾಷ್ಟ್ರ ವಿರೋಧಿ ಬರಹ ಯಾರೇ ಹಾಕಿದರೂ ಕಾನೂನಿನಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಅದನ್ನು ತೆಗೆದುಕೊಳ್ಳುತ್ತೇವೆ" ಎಂದು ಹೇಳಿದರು.
ಅವರು ಇಂದು ಮಣಿಪಾಲದ ಕಂಟ್ರಿ ಇನ್ ಹೋಟೆಲ್ನಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, "ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಪೇಜ್ ಪ್ರಮುಖರನ್ನು ಆಯ್ಕೆ ಮಾಡಲಾಗಿದೆ. ಪಂಚರತ್ನ, ಪಂಚ ಸೂತ್ರದ ಎಂಬ ಹೊಸ ಕಲ್ಪನೆಯಲ್ಲಿ ಕೆಲಸ ಮಾಡುತ್ತೇವೆ. ಅಲ್ಲದೆ ಕಾಲ್ ಸೆಂಟರ್ ರಚನೆ, ಪ್ರತಿ ಮತಗಟ್ಟೆಗಳಲ್ಲಿ ಕುಟುಂಬ ಸಮ್ಮೇಳನ ನಡೆಸಲಾಗುತ್ತದೆ. ಗ್ರಾಮ ಪಂಚಾಯತ್ ಗೆ ಹೆಚ್ಚು ಶಕ್ತಿ ತುಂಬುವ ಕೆಲಸ ಆಗಬೇಕು. ಗಾಂಧೀಜಿಯ ಕನಸಿನಂತೆ ಗ್ರಾಮಗಳು ರಾಮರಾಜ್ಯವಾಗಬೇಕು. ಕಾರ್ಯಕರ್ತರು ನಾಯಕರಾಗಬಲ್ಲ ಕ್ಷೇತ್ರ ಗ್ರಾಮ ಪಂಚಾಯತ್. ಹಾಗಾಗಿ, ಈ ಬಾರಿ ಅತೀ ಹೆಚ್ಚು ಗ್ರಾಮ ಪಂಚಾಯತಿ ಬಿಜೆಪಿ ಪಡೆಯಲು ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದೇವೆ" ಎಂದರು.
"ಗ್ರಾಮ ಪಂಚಾಯತ್ ಚುನಾವಣೆಯ ಪೂರ್ವ ತಯಾರಿಗಾಗಿ ಈ ಸಮಾವೇಶವನ್ನು ರಾಜ್ಯದ 31 ಜಿಲ್ಲೆಗಳಲ್ಲಿ ಆಯೋಜಿಸಲಾಗಿದೆ. ಒಟ್ಟು ಆರು ತಂಡಗಳು ರಾಜ್ಯ ವ್ಯಾಪಿ ಪ್ರವಾಸ ಮಾಡಲಿವೆ. ತಂಡ ಐದು ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ. ಒಂದು ರಾಜ್ಯದ ಮೊದಲ ಸಮಾವೇಶದ ಉಡುಪಿಯಲ್ಲೇ ಉದ್ಘಾಟನೆಗೊಳ್ಳಲಿದೆ" ಎಂದರು.
ಸಚಿವ ಸಂಪು ವಿಸ್ತರಣೆಯ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ವಿವೇಚನೆ ಗೆ ಬಿಟ್ಟದ್ದು. ರಾಷ್ಟ್ರೀಯ ನಾಯಕರು ಒಟ್ಟಾಗಿ ಚರ್ಚೆ ಮಾಡುತ್ತಾರೆ" ಎಂದು ಉತ್ತರ ಕೊಟ್ಟರು.
ಇನ್ನು ಕೆಲವರು ನಾಯಕರು ದೆಹಲಿಯಲ್ಲಿ ರಾಷ್ಟ್ರೀಯ ನಾಯಕರನ್ನು ಭೇಟಿ ಆದ ವಿಚಾರವಾಗಿ ಮಾತನಾಡಿದ ಅವರು, "ಅದು ಸರಕಾರದಿಂದ ತಮ್ಮ ಇಲಾಖೆಗೆ ಸಂಬಂಧಿಸಿ ಅನುದಾನ ತರಲು ಭೇಟಿಯಾಗುತ್ತಾರೆ. ಹಾಗೆಯೇ ಸೌಜನ್ಯಕ್ಕಾಗಿ ನಾಯಕರನ್ನು ಭೇಟಿ ಆಗುತ್ತಾರೆ ಅಷ್ಟೆ" ಎಂದರು.
ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ ನಾರಾಯಣ್, ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ, ಎಸ್. ಮುನಿಸ್ವಾಮಿ, ಶಾಸಕ ರಘುಪತಿ ಭಟ್, ಶಾಸಕ ಲಾಲಾಜಿ ಮೆಂಡನ್, ಮಂಗಳೂರು ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯ್ಲಾಡಿ ಮುಂತಾದವರು ಉಪಸ್ಥಿತರಿದ್ದರು.
ಬಳಿಕ ಬಿ.ಜೆ.ಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಕರ್ನಾಟಕ ಸರಕಾರದ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅವರು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದುಕೊಂಡರು.
ಈ ಸಂದರ್ಭದಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್,ಪಕ್ಷದ ಪದಾಧಿಕಾರಿಗಳು,ವ್ಯವಸ್ಥಾಪಕರಾದ ಗೋವಿಂದ್ರಾಜ್, ಪಿ.ಆರ್.ಓ ಶ್ರೀಶ ಕಡೆಕಾರ್ ಮೊದಲಾದವರು ಉಪಸ್ಥಿತರಿದ್ದರು.