ಉಡುಪಿ, ನ. 27 (DaijiworldNews/MB) : ಯೋಗೀಶ್ವರ್ಗೆ ಸಚಿವ ಸ್ಥಾನ ನೀಡುವ ವಿಚಾರವಾಗಿ ಡಿಸಿಎಂ ಅಶ್ವತ್ಥ ನಾರಾಯಣ್ ಯೋಗೀಶ್ವರ್ ಪರ ಮಾತನಾಡುತ್ತ ,"ಅವರಿಗೆ ಸಚಿವ ಸ್ಥಾನ ಕೊಡಬೇಕು ಎನ್ನುವ ಒತ್ತಾಯ ಇದೆ. ಬಹಳಷ್ಟು ಜವಾಬ್ದಾರಿ ಹೊತ್ತು ಕಾರ್ಯನಿರ್ವಹಿಸಿದ್ದಾರೆ. ಅವರಿಗೂ ಸಚಿವ ಸ್ಥಾನದ ಅಪೇಕ್ಷೆ ಇದೆ. ಅವರಿಗೆ ಸಚಿವ ಸ್ಥಾನ ಸಿಗಲಿ ಎನ್ನುವುದು ನಮ್ಮ ಅಭಿಪ್ರಾಯವಾಗಿದೆ" ಎಂದರು.


ಅವರು ಇಂದು ಉಡುಪಿ ಜಿಲ್ಲೆಯಲ್ಲಿ ಪ್ರಥಮ ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಪಾಲ್ಗೊಳ್ಳಲು ಬಂದ ಸಂದರ್ಭದಲ್ಲಿ ಮಾಧ್ಯಮದವರಿಗೆ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, "ಕೇಂದ್ರದ ವರಿಷ್ಟರು ಮತ್ತು ಸಿಎಂ ಸಮಾಲೋಚನೆ ಮಾಡುತ್ತಾರೆ. ಸಂಪುಟ ವಿಸ್ತರಣೆ ಸಾಕಷ್ಟು ಗಮನ ಸೆಳೆದಿದೆ. ವಿಸ್ತರಣೆ ಒಂದು ಜಟಿಲ ವಿಚಾರ, ಅಲ್ಪಾವಧಿಯಲ್ಲಿ ಎಲ್ಲಾ ತಿಳಿಯುತ್ತದೆ. ಮೂಲ ಬಿಜೆಪಿಗರಿಗೆ ಬೇಸರ ವಿಚಾರ. ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗಬೇಕಾಗುತ್ತೆ. ವಲಸೆ ಬಂದವರೂ ಸರ್ಕಾರ ರಚನೆಗೆ ಕಾರಣೀಕರ್ತರಾಗಿದ್ದಾರೆ. ಎಲ್ಲರನ್ನೂ ಕುಟುಂಬದ ರೀತಿ ಜೋಡಿಸಿಕೊಂಡು ಹೋಗಬೇಕಾಗುತ್ತೆ. ಬಿಜೆಪಿಯಲ್ಲಿದ್ದಾಗ ಎಲ್ಲರೂ ಒಂದೇ ಒಳಗೆ ಹೊರಗೆ ಎನ್ನುವ ಭಾವನೆ ಸರಿಯಲ್ಲ. ಬಿಜೆಪಿಯಲ್ಲಿ ತಾರತಮ್ಯಕ್ಕೆ ಅವಕಾಶವಿಲ್ಲ" ಎಂದು ಹೇಳಿದರು.
ಸಿ.ಟಿ.ರವಿ ಕಚೇರಿ ಉದ್ಘಾಟನೆ ವಿಚಾರವಾಗಿ ಮಾತನಾಡಿದ ಅವರು, "ಸಚಿವ ಸಂಪುಟ ಸಭೆ ತ್ವರಿತವಾಗಿ ನಿಶ್ಚಯವಾಗಿದ್ದು, ಯಾರಿಗೂ ಸಚಿವ ಸಂಪುಟ ಸಭೆಯ ಬಗ್ಗೆ ತಿಳಿದಿರಲಿಲ್ಲ. ಕಚೇರಿ ಉದ್ಘಾಟನೆ ಮೊದಲೇ ನಿಶ್ಚಯವಾಗಿತ್ತು. ಹಾಗಾಗಿ ಸಚಿವರು ಹೋಗಿಯಾಗಿದೆ'' ಎಂದರು.
ಲಿಂಗಾಯತರಿಗೆ ಒಬಿಸಿ ಮೀಸಲಾತಿ ವಿಚಾರವಾಗಿ ಮಾತನಾಡಿದ ಅವರು, "ಈ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲ. ಗುರವಾರವಷ್ಟೇ ಈ ವಿಚಾರ ಮುನ್ನಲೆಗೆ ಬಂದಿದೆ. ಇಂದು ಸಂಪುಟದಲ್ಲಿ ಚರ್ಚೆ ಆಗಿರುತ್ತದೆ. ನಾನು ಗ್ರಾಮ ಸ್ಚರಾಜ್ ಸಮಾವೇಶ ಪ್ರವಾಸದಲ್ಲಿದ್ದೇನೆ. ಎಲ್ಲರ ಭಾವನೆ ಅವಶ್ಯಕತೆಗಳನ್ನು ವೈಜ್ಞಾನಿಕವಾಗಿ ಗಮನಿಸಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಯಾರು ಯಾರಿಗೆ ಏನೇನು ಸಲ್ಲಬೇಕು ಅದನ್ನು ಸಲ್ಲಿಸುವ ಕೆಲಸ ಸರ್ಕಾರ ಮಾಡುತ್ತದೆ" ಎಂದರು.