ಮಂಗಳೂರು, ನ.27 (DaijiworldNews/PY): "ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಕೊರೊನಾ ಸೋಂಕಿನಿಂದ ಮೃತಪಟ್ಟ ಬಿಪಿಎಲ್ ಪಡಿತರ ಹೊಂದಿರುವ ಬಡವರ ಕುಟುಂಬದವರಿಗೆ 5 ಲಕ್ಷ ರೂ.ಗಳ ಪರಿಹಾರವನ್ನು ನೀಡಬೇಕು" ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಐವನ್ ಡಿಸೋಜಾ ಒತ್ತಾಯಿಸಿದ್ದಾರೆ.





ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಕೊರೊನಾದ ಎರಡನೇ ಅಲೆಯನ್ನು ಎದುರಿಸಲು ರಾಜ್ಯದ ಬಿಜೆಪಿ ಸರ್ಕಾರ ಯಾವುದೇ ಸಿದ್ಧತೆ ಮಾಡಿಲ್ಲ. ಅವಿಭಜಿತ ಜಿಲ್ಲೆಗಳ ಜಿಲ್ಲಾಡಳಿತಗಳು ಕೂಡಾ ಕೊರೊನಾದ ಎರಡನೇ ಅಲೆಯನ್ನು ಎದುರಿಸಲು ತಯಾರು ಮಾಡುವಲ್ಲಿ ವಿಫಲವಾಗಿದೆ. ರಾಜ್ಯದಲ್ಲಿ ವ್ಯಾಪಿಸುತ್ತಿರುವ ಕೊರೊನಾ ನಿಯಂತ್ರಣಕ್ಕೆ ನಿಮ್ಮ ತಯಾರಿ ಏನು?" ಎಂದು ಪ್ರಶ್ನಿಸಿದರು.
"ಸರ್ಕಾರ ಇನ್ನೂ ಯಾವುದೇ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಹಾಸಿಗೆಗಳನ್ನು ಕೊರೊನಾ ರೋಗಿಗಳಿಗೆ ನೀಡುವ ಆದೇಶವನ್ನು ಸರ್ಕಾರ ಹಿಂತೆಗೆದುಕೊಂಡಿದೆ" ಎಂದರು.
"ಜಿಲ್ಲಾಡಳಿತ ನಡೆಸಿದ ಕೊರೊನಾ ಪರೀಕ್ಷೆಗಳ ಸಂಖ್ಯೆ ಸಂಪೂರ್ಣವಾಗಿ ನಕಲಿ. ಜಿಲ್ಲಾಡಳಿತ ಪರೀಕ್ಷೆಯ ಸಂಖ್ಯೆಯನ್ನು ಹೆಚ್ಚಿಸಬೇಕು. ಕೊರೊನಾ ನಿಯಂತ್ರಣಕ್ಕೆ ಹೊರಡಿಸಲಾದ ಮಾರ್ಗಸೂಚಿಗಳನ್ನು ಪಾಲಿಸದ ಜನರ ವಿರುದ್ಧ ಸರ್ಕಾರ ಹಾಗೂ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ" ಎಂದು ಆರೋಪಿಸಿದರು.
"ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೂಲಸೌಕರ್ಯಗಳನ್ನು ನವೀಕರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಹಾಗೂ ಆರೋಗ್ಯದ ಮೇಲ್ವಿಚಾರಣೆಗಾಗಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಬೇಕು" ಎಂದು ತಿಳಿಸಿದರು.
"ರಾಜ್ಯ ಸರ್ಕಾರವು ಕೊರೊನ ಲಸಿಕೆಯನ್ನು ಇಡೀ ರಾಜ್ಯದ ಜನರಿಗೆ ಉಚಿತವಾಗಿ ನೀಡಬೇಕು. ಕೊರೊನಾ ಪರೀಕ್ಷೆಗೆ ಶುಲ್ಕ ವಿಧಿಸುವ ಬದಲು, ಸರ್ಕಾರವು ಜನರಿಗೆ ಪರೀಕ್ಷೆಗಳನ್ನು ಉಚಿತವಾಗಿ ನಡೆಸಬೇಕು" ಎಂದರು.
ಬಳಿಕ, ದ.ಕ ಜಿಲ್ಲಾ ಕಾಂಗ್ರೆಸ್ ಸದಸ್ಯ ವಿವೇಕ್ ರಾಜ್ ಪೂಜಾರಿ ಅವರು ಅಗತ್ಯವಿರುವ ಹತ್ತು ಮಂದಿಗೆ ತಳ್ಳುಗಾಡಿಯನ್ನು ನೀಡಿದರು. ಮಹಮ್ಮದ್ ಅಮನ್, ವಾರಿಜಾ ಕೆ, ಪದ್ಮಾವತಿ ಕಮತಾರ, ಕಿರಣ್ ವೆಲೆನ್ಸಿಯಾ, ಯಾಕುಬ್ ಅಡ್ಯಾರ್, ಭವಾನಿಶಂಕರ್ ಯೆಯ್ಯಾಡಿ, ಕೆ.ಚಂದ್ರಿಕಾ ಕೋಡಿಕಲ್, ಮಹಮ್ಮದ್ ಫಾರೂಕ್, ರೇಣುಕಾ ಪಂಜಿಮೊಗರು ಹಾಗೂ ನಜಿಮಾ ಅರ್ಕುಲಾ ಇವರು ಫಲಾನುಭವಿಗಳಾಗಿದ್ಧಾರೆ.