ಮೈಸೂರಿನಲ್ಲಿ ನಡೆಯಲಿರುವ 83ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಿರಿಯ ಸಾಹಿತಿ ಚಂದ್ರ ಶೇಖರ ಪಾಟೀಲ್( ಚಂಪಾ) ಸಮ್ಮೇಳನ ಅದ್ಯಕ್ಷ ರಾಗಿ ಆಯ್ಕೆ ಯಾಗಿದ್ದಾರೆ . ಪ್ರತಿ ವರ್ಷದಂತೆ ಆಯ್ಕೆಯಲ್ಲಿ ಹಲವರ ಹೆಸರು ಕೇಳಿ ಬಂದಿದ್ದರೂ ಅಂತಿಮವಾಗಿ ಚಂಪಾ ಆಯ್ಕೆಯಾಗಿದ್ದಾರೆ. ತಲಪಾಡಿಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ ನ 101ನೇ ವಾರ್ಷಿಕ ಮಹಾಸಭೆಯಲ್ಲಿ ಕ ಸಾ ಪ ಅಧ್ಯಕ್ಷ ಮನು ಬಳಿಗಾರ್, ಸಾಹಿತಿ ಚಂಪಾ ಹೆಸರನ್ನು ಘೋಷಣೆ ಮಾಡಿದರು. ರಾಜ್ಯದಲ್ಲಿ ವೈಚಾರಿಕ ನಿಲುವು ಹೊಂದಿರುವ ಬರಹಗಾರರು ಕೆಂಗಣ್ಣಿಗೆ ಗುರಿಯಾಗುತ್ತಿರುವ ಈ ಕಾಲಘಟ್ಟದಲ್ಲೇ ವಿಚಾರವಾದಿ ಚಂಪಾ ಅವರ ಆಯ್ಕೆ ಮಹತ್ವ ಪಡೆದುಕೊಂಡಿದೆ.
ಚಂದ್ರಶೇಖರ ಪಾಟೀಲ ಅವರ ಬಗ್ಗೆ :
ಚಂದ್ರಶೇಖರ ಪಾಟೀಲ (ಜೂನ್ 18, 1939) ಕನ್ನಡ ನಾಡಿನ ಕವಿ, ನಾಟಕಕಾರ, ಸಂಘಟನಕಾರ, ಪತ್ರಿಕಾ ಸಂಪಾದಕ, ಆಡಳಿತಗಾರ, ಕನ್ನಡ ಹೋರಾಟಗಾರ ಹೀಗೆ ಬಹುಮುಖ ವ್ಯಕ್ತಿತ್ವದಿಂದ ಪ್ರಸಿದ್ಧರಾಗಿದ್ದಾರೆ. ಚಂದ್ರಶೇಖರ ಪಾಟೀಲರ ಕಾವ್ಯನಾಮ "ಚಂಪಾ"
ಕನ್ನಡ ನಾಡು-ನುಡಿ, ಸಂಸ್ಕೃತಿಯ ರಕ್ಷಣೆಗಾಗಿ ನಿರಂತರ ಹೋರಾಡುತ್ತಾ ಬಂದಿರುವ ಚಂಪಾರವರಿಗೆ ಬಂದಿರುವ ಪ್ರಶಸ್ತಿ ಗೌರವಗಳು ಹಲವಾರು. ಇವುಗಳಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ (1960, 74, 76), ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೆ.ವಿ. ಶಂಕರಗೌಡ ರಂಗಭೂಮಿ ಪ್ರಶಸ್ತಿ, ಸಂದೇಶ್ ಮಾಧ್ಯಮ ಪ್ರಶಸ್ತಿ, ಕರುನಾಡ ಭೂಷಣ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಮತ್ತು ಪಂಪ ಪ್ರಶಸ್ತಿ ಮುಂತಾದವುಗಳು ಪ್ರಮುಖವಾಗಿವೆ.