ಮಂಗಳೂರು, ನ.28 (DaijiworldNews/PY): 2021ರ ಅಕ್ಟೋಬರ್ನಲ್ಲಿ ಚೀನಾದಲ್ಲಿ ನಡೆಯಲಿರುವ ಮಿಸ್ ಟೂರಿಸಂ ಇಂಟರ್ ನ್ಯಾಷನಲ್ ಸೌಂದರ್ಯ ಸ್ಪರ್ಧೆಯಲ್ಲಿ ಕರಾವಳಿಯ ಯುವ ಪ್ರತಿಭೆ ಪೆರಾಬೆಯ ಪೃಥ್ವಿ ಆಳ್ವ ಅವರು ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ತಮ್ಮದಾಗಿಸಿಕೊಂಡಿದ್ದಾರೆ.




ಇವರು ಪುಣೆಯ ತಿಯಾರಾ ಪೆಜೆಂಟ್ ಸ್ಟುಡಿಯೋದಲ್ಲಿ ರಿತಿಕಾ ರಾಮ್ಜಿ ಅವರ ಬಳಿ ಮಾಡೆಲಿಂಗ್ ತರಬೇತಿಯನ್ನು ಪಡೆದುಕೊಂಡಿದ್ದು, ಮಿಸ್ ಟೂರಿಸಂ ಇಂಟರ್ ನ್ಯಾಷನಲ್ ಸ್ಪರ್ಧಿಗಳ ಆಯ್ಕೆಗಾಗಿ ನಡೆದ ಆನ್ಲೈನ್ ಆಡಿಷನ್ನಲ್ಲಿ ಪಾಲ್ಗೊಂಡು ವಿಜೇತರಾಗಿ ಅಂತರಾಷ್ಟ್ರೀಯ ಸ್ಪರ್ಧೆಗೆ ಭಾರತದಿಂದ ಆಯ್ಕೆಯಾದ ಏಕೈಕ ಸ್ಪರ್ಧಿಯಾಗಿದ್ದಾರೆ.
ಪೃಥ್ವಿ ಆಳ್ವ ಅವರು ಪೆರಾಬೆಯ ಪರಾರಿ ಗುತ್ತಿನ ಪವಿತ್ರಾ ಜೆ ಆಳ್ವ ಹಾಗೂ ಸುಜೀರ್ ಗುತ್ತಿನ ಜಗದೀಶ್ ಆಳ್ವ ಅವರ ಪುತ್ರಿಯಾಗಿದ್ದು, ತಮ್ಮ ಶಾಲಾ ಶಿಕ್ಷಣವನ್ನು ಮುಡಿಪುವಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಪೂರೈಸಿದ್ದು, ಪ್ರಸ್ತುತ ಮುಕ್ಕದಲ್ಲಿನ ಶ್ರೀನಿವಾಸ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಹಾಗೂ ರಿಸರ್ಚ್ ಸೆಂಟರ್ನಲ್ಲಿ ಮೂರನೇ ವರ್ಷದ ಎಂಬಿಬಿಎಸ್ ವ್ಯಾಸಂಗದಲ್ಲಿ ತೊಡಗಿದ್ದಾರೆ. ಅಲ್ಲದೇ ಕ್ರೀಡಾ ಚಟುವಟಿಕೆಗಳಲ್ಲೂ ಕೂಡಾ ಮುಂಚೂಣಿಯಲ್ಲಿರುವ ಇವರು ತಮ್ಮ 15ನೇ ವರ್ಷದಲ್ಲೇ ಎತ್ತರ ಜಿಗಿತದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು. 2015ರಲ್ಲಿ ಎನ್.ಸಿ.ಸಿ ಗಣರಾಜ್ಯೋತ್ಸವದ ಪೆರೇಡ್ನಲ್ಲಿ ಪಾಲ್ಗೊಂಡಿದ್ದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಡಿ ಟಚ್ ಇಂಟರ್ ನ್ಯಾಷನಲ್ ಫೌಂಡೇಶನ್ ಪ್ರತಿವರ್ಷ ನಡೆಸುತ್ತಿರುವ ಸೌಂದರ್ಯ ಸ್ಪರ್ಧೆ ಇದಾಗಿದ್ದು, 60ಕ್ಕಿಂತಲೂ ಅಧಿಕ ದೇಶಗಳು ಇದರ ಸದಸ್ಯತ್ವ ಪಡೆದುಕೊಂಡಿವೆ. ಭಾರತದಲ್ಲಿ 2001 ಹಾಗೂ 2008ರಲ್ಲಿ ಈ ಸೌಂದರ್ಯ ಸ್ಪರ್ಧೆಗಳು ನಡೆದಿದ್ದು, ಇಲ್ಲಿಯವರೆಗೆ ಇಬ್ಬರು ಭಾರತೀಯರು ಮಿಸ್ ಟೂರಿಸಂ ಇಂಟರ್ ನ್ಯಾಷನಲ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.