ಉಡುಪಿ, ನ. 28 (DaijiworldNews/HR): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನವೆಂಬರ್ 29 ರಂದು ನಗರಕ್ಕೆ ಭೇಟಿ ನೀಡಲಿದ್ದು, ಕೆಪಿಸಿಸಿ ಮುಖ್ಯಸ್ಥರಾದ ಬಳಿಕ ಮೊದಲ ಬಾರಿಗೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲು ಉಡುಪಿ ಆಗಮಿಸಲಿದ್ದಾರೆ ಎಂದು ಡಿಸಿಸಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.


ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅಶೋಕ್, "ಸಮಾವೇಶದ ಮುಖ್ಯ ಉದ್ದೇಶ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯ ಭಾಗವಾಗಿದೆ ಮತ್ತು ಪಕ್ಷದ ಕಾರ್ಯಕರ್ತರನ್ನು ಪ್ರೇರೇಪಿಸುವುದಾಗಿದೆ. ಡಿಕೆಶಿ ಅವರನ್ನು ಜಿಲ್ಲೆಗೆ ಸ್ವಾಗತಿಸಲು ಸಮಿತಿಯಿಂದ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ" ಎಂದರು.
'ಕೆಪಿಸಿಸಿ ಅಧ್ಯಕ್ಷರು ಇಂದು ಸಂಜೆ 8 ಗಂಟೆಗೆ ಬೈಂದೂರಿಗೆ ಆಗಮಿಸಲಿದ್ದು, ಶ್ರೀ ಕ್ಷೇತ್ರ ಕಮಲಶಿಲೆ ದೇವಸ್ಥಾನ ಭೇಟಿ ನೀಡ ದೇವರ ದರ್ಶನ ಪಡೆದು ಬಳಿಕ ಕೊಲ್ಲೂರಿನಲ್ಲಿ ಉಳಿಯುತ್ತಾರೆ.
ನ. 29 ರಂದು ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನ ಪಡೆದು ಬಳಿಕ ಮಾಜಿ ಸಚಿವ ಗೋಪಾಲ್ ಭಂಡಾರಿಯ ಮನೆಯಲ್ಲಿ ಉಪಾಹಾರ ಸೇವಿಸಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಸಂಕ್ಷಿಪ್ತ ಸಭೆ ನಡೆಸಲಿದ್ದಾರೆ.
ಬಳಿಕ ಪಕ್ಷದ ಸಮಾವೇಶದಲ್ಲಿ ಭಾಗವಹಿಸಲು ಉಡುಪಿಗೆ ಬರಲಿದ್ದು, ಕಾರ್ಯಕ್ರಮದ ನಂತರ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರು, ಬ್ಲಾಕ್ ಅಧ್ಯಕ್ಷರು ಮತ್ತು ವಿವಿಧ ಮುಂಚೂಣಿ ಘಟಕದ ಮುಖಂಡರೊಂದಿಗೆ ಸಭೆಯಲ್ಲಿ ಭಾಗವಹಿಸಲು ಕಾಂಗ್ರೆಸ್ ಭವನ, ಬ್ರಹ್ಮಗಿರಿಗೆ ತೆರಳಲಿದ್ದಾರೆ ಎಂದರು.
ರಾಜ್ಯ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ, ರಾಜ್ಯ ಮಹಿಳಾ ಕಾಂಗ್ರೆಸ್ ವಿಭಾಗದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಶಾಸಕರಾದ ಗೋಪಾಲ್ ಭಂಡಾರಿ, ಪ್ರಮೋದ್ ಮಧ್ವರಾಜ್, ವಿನಯ್ ಕುಮಾರ್ ಸೊರಕೆ, ಯು ಆರ್ ಸಭಾಪತಿ, ಮಹಿಳಾ ಕಾಂಗ್ರೆಸ್ ವಿಭಾಗದ ಜಿಲ್ಲಾಧ್ಯಕ್ಷ ಮತ್ತು ಎಲ್ಲಾ ಘಟಕ ನಾಯಕರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಭಾಸ್ಕರ್ ರಾವ್ ಕೆಡಿಯೂರು, ಡಿಸಿಸಿ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಪ್ರಶಾಂತ್, ಅಣ್ಣಯ್ಯ ಶೆರಿಗಾರ್ ಮತ್ತು ಕೀರ್ತಿ ಶೆಟ್ಟಿ ಉಪಸ್ಥಿತರಿದ್ದರು.