ಕಾಸರಗೋಡು, ನ. 28 (DaijiworldNews/SM): ಕೊರೋನಾದ ಎರಡನೇ ಅಲೆ ಸಾಧ್ಯತೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಕೆಲ ನಿಯಂತ್ರಣ ಗಳನ್ನು ಜಾರಿಗೆ ತರಲು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

ನಿಷೇಧಾಜ್ಞೆ ಹಿಂತೆಗೆದುಕೊಂಡಿರುವುದು, ಅಂತಾರಾಜ್ಯ ಬಸ್ಸು ಸಂಚಾರ ಪುನರಾರಂಭ, ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ ಮೊದಲಾದ ಕಾರಣಗಳಿಂದ ಸೋಂಕಿತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎಂಬ ಮುನ್ನೆಚ್ಚರಿಕೆ ಇದೆ. ಈ ಹಿನ್ನಲೆಯಲ್ಲಿ ನಿರ್ಬಂಧಗಳನ್ನು ಹೇರಲು ಜಿಲ್ಲಾಡಳಿತ ಮುಂದಾಗಿದೆ.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಜಿಲ್ಲಾ ವೈದ್ಯಾಧಿಕಾರಿ ಡಾ. ಎ.ವಿ.ರಾಮದಾಸ್, ಡಿ.ಟಿ.ಪಿ.ಸಿ. ಕಾರ್ಯದರ್ಶಿ ಬಿಜು ರಾಘವನ್ ಬೇಕಲ, ಎಸ್.ಐ. ಅಜಿತ್ ಕುಮಾರ್, ಮೇಲ್ಪರಂಬ ಎಸ್.ಎಚ್.ಒ. ಬೆನ್ನಿ ಲಾಲು, ಪಂಚಾಯತ್ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.