ಮಂಗಳೂರು, ನ.29 (DaijiworldNews/PY): "ನಗರದಲ್ಲಿ ಗೋಡೆ ಬರಹ ಬರೆಯುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ಇದರ ಪತ್ತೆ ಬಿಜೆಪಿ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿದೆ. 15 ದಿನಗಳೊಳಗೆ ಆರೋಪಿಗಳ ಬಂಧನವಾಗದಿದ್ದಲ್ಲಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ" ಎಂದು ಮಾಜಿ ಸಚಿವ ಯು.ಟಿ. ಖಾದರ್ ಹೇಳಿದರು.


ಮಂಗಳೂರಿನಲ್ಲಿ ಮಾತನಾಡಿದ ಅವರು, "ನಗರದಲ್ಲಿ ಗೋಡೆ ಬರಹ ಬರೆಯುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ಇದನ್ನು ಯಾರೇ ಆದರೂ ಸಹಿಸಲು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಇದರ ಪತ್ತೆ ಬಿಜೆಪಿ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿದೆ. ಇವರಿಗೆ ಬೆಂಬಲವಾಗಿರುವವರನ್ನು ಶೀಘ್ರವೇ ಪತ್ತೆ ಹಚ್ಚಿ ಷಡ್ಯಂತ್ರ ಬಯಲು ಮಾಡಬೇಕಿದೆ. ಇದೆಲ್ಲಾ ನಡೆದರೂ ಕೂಡಾ ಗುಪ್ತಚರ ಇಲಾಖೆ ಏನು ಮಾಡುತ್ತಿದೆ? ಮತ್ತೆ ಮತ್ತೆ ಏಕೆ ಹೀಗೆ ಆಗುತ್ತಿದೆ?"" ಎಂದು ಪ್ರಶ್ನಿಸಿದರು.
"ಗೋಡೆ ಬರಹ ಬರೆದವರನ್ನು ಪತ್ತೆಹಚ್ಚಿ ಅಂಥವರನ್ನು ಬೇರೆ ದೇಶಕ್ಕೆ ಬಿಟ್ಟು ಬರಬೇಕು. ಅಂಥವರಿಗೆ ನಮ್ಮ ಮಣ್ಣಿನಲ್ಲಿ ಇರಲು ಯಾವುದೇ ಹಕ್ಕಿಲ್ಲ. ದ.ಕ ಜಿಲ್ಲೆಯಲ್ಲಿ ಇವತ್ತು ಕಾನೂನಿಗೆ ಹೆದರದ ಪರಿಸ್ಥಿತಿ ಇದೆ" ಎಂದರು.
"ಕಾಂಗ್ರೆಸ್ ಸರ್ಕಾರ ಇದ್ದಾಗ ಗೋಡೆ ಬರಹ ಹಾಗೂ ಇನ್ನಿತರ ವಿಚಾರಗಳು ಇರಲಿಲ್ಲ. ಆದರೆ, ಬಿಜೆಪಿ ಸರ್ಕಾರ ಬಂದಾಗ ಸಮಾಜ ದ್ರೋಹಿ ಶಕ್ತಿಗಳಿಗೆ ಧೈರ್ಯ ಬರುತ್ತದೆ. ಇದಕ್ಕೆ ಜಿಲ್ಲೆಯ ಎಂಪಿ, ಎಂಎಲ್ಎಗಳು ಉತ್ತರ ಕೊಡಬೇಕು" ಎಂದು ಒತ್ತಾಯಿಸಿದರು.
"ಈ ವಿಚಾರವನ್ನು ಗೃಹ ಸಚಿವರ ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಒಂದು ವಾರದೊಳಗೆ ಇದರ ಆರೋಪಿಗಳ ಪತ್ತೆಯಾಗಬೇಕು. ಅದು ಬಿಟ್ಟು 15 ದಿನಗಳ ಒಳಗೆ ಬಂಧನ ಆಗದೇ ಇದ್ದಲ್ಲಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ. ಅವರು ಮಾನಸಿಕ ಅಸ್ವಸ್ಥ ಅಥವಾ ಯಾರೇ ಆಗಿರಲಿ ಅರೆಸ್ಟ್ ಮಾಡಿ" ಎಂದರು.
"ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜವಾಬ್ದಾರಿ ಅಲ್ವಾ? ರಾಜ್ಯ ಸರ್ಕಾರ ಇಂದು ಕೋಮಾ ಸ್ಥಿತಿಯಲ್ಲಿ ಇದೆ" ಎಂದು ಹೇಳಿದರು.