ಉಡುಪಿ, ನ. 29 (DaijiworldNews/MB) : ಲವ್ ಜಿಹಾದ್ ಕಾನೂನು ತರುವ ಮುನ್ನ ಯಾವ ನಾಯಕರ ಮಕ್ಕಳು ಯಾರನ್ನು ವಿವಾಹವಾಗಿದ್ದಾರೆ ನೋಡಲಿ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ನವೆಂಬರ್ 29 ರ ರವಿವಾರ ಹೇಳಿದರು.










ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಕ್ಕೆ ನಗರಕ್ಕೆ ಬಂದಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಭಾರೀ ಸುದ್ದಿಯಲ್ಲಿರುವ ಸಂಪುಟ ವಿಸ್ತರಣೆಯ ಬಗ್ಗೆ ಮಾತನಾಡಿದ ಅವರು, "ಸಂಪುಟ ವಿಸ್ತರಣೆಯು ಬಿಜೆಪಿಯ ನಿರ್ಧಾರ. ಅದು ಬಿಜೆಪಿಯ ಆಂತರಿಕ ವಿಷಯ. ಅದರಲ್ಲಿ ಕಾಂಗ್ರೆಸ್ ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ. ಆ ವಿಚಾರದಲ್ಲಿ ನಾವು ಯಾವುದೇ ಸಂಬಂಧ ಹೊಂದಿಲ್ಲ'' ಎಂದು ಹೇಳಿದರು.
'ಲವ್ ಜಿಹಾದ್' ಮತ್ತು 'ಗೋಹತ್ಯೆ ನಿಷೇಧ'ದ ಬಗ್ಗೆ ಮಾಧ್ಯಮ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ''ಗೋಹತ್ಯೆ ನಿಷೇಧ ಮಸೂದೆ ಹೊಸತೇನಲ್ಲ. ಇದು ಬಹಳ ಹಿಂದಿನಿಂದಲೂ ಅಸ್ತಿತ್ವದಲ್ಲಿದೆ. 'ಲವ್ ಜಿಹಾದ್'ಗೆ ಸಂಬಂಧಿಸಿದಂತೆ ರಾಷ್ಟ್ರೀಯ ನಾಯಕರುಗಳು ನಿರ್ಧಾರ ಕೈಗೊಳ್ಳಬೇಕು. ಲವ್ ಜಿಹಾದ್ ಕಾನೂನು ತರುವ ಮುನ್ನ ಯಾವ ನಾಯಕರ ಮಕ್ಕಳು ಯಾರನ್ನು ವಿವಾಹವಾಗಿದ್ದಾರೆ ನೋಡಲಿ'' ಎಂದು ಬಿಜೆಪಿ ನಾಯಕರುಗಳಿಗೆ ಟಾಂಗ್ ನೀಡಿದರು.
"ಇದು ಭಾರತ. ಜನರು ಯಾವುದೇ ಪಕ್ಷಕ್ಕೆ ಸೇರಿದವರಾಗಿರಬಹುದು, ಆದರೆ ಧರ್ಮದ ಆಯ್ಕೆ ಅವರ ಹಕ್ಕು. ಈ ದೇಶದಲ್ಲಿ ಪ್ರೀತಿ, ನಂಬಿಕೆ ಮತ್ತು ಮಾನವೀಯತೆ ಬಹಳ ಮುಖ್ಯ" ಎಂದು ಹೇಳಿದರು.
ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಎನ್.ಆರ್ ಸಂತೋಷ್ ಆತ್ಮಹತ್ಯೆಗೆ ಯತ್ನಕಾರಣವಾದ 'ವಿಡಿಯೋ' ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, "ನಾನು ಈ ಬಗ್ಗೆ ಎಲ್ಲಿಯೂ ಮಾತನಾಡಲಿಲ್ಲ. ನನ್ನ ಸ್ನೇಹಿತರೊಬ್ಬರು ಅದನ್ನು ನನಗೆ ಕಳುಹಿಸಿದ್ದಾರೆ. ಹಿಂದಿನ ರಾಜಕೀಯ ಕಾರ್ಯದರ್ಶಿ ರಾಜೀನಾಮೆ ನೀಡಿದರು ನಂತರ ಇನ್ನೊಬ್ಬರನ್ನು ಹುದ್ದೆಯಿಂದ ವಜಾ ಮಾಡಲಾಯಿತು" ಎಂದು ಸ್ಪಷ್ಟನೆ ನೀಡಿದರು.
''ಇದಲ್ಲದೆ, ಸಂತೋಷ್ ಪಕ್ಷದ ಕಾರ್ಯಕರ್ತರಲ್ಲ. ಅವರ ಹೆಸರು ಎಲ್ಲಾ ಮಾಧ್ಯಮದಲ್ಲಿ ಕಾಣಿಸಿಕೊಳ್ಳುತ್ತಿದೆ. ಅಪಾರ ಒತ್ತಡದಿಂದಾಗಿ ಏನಾಗಿರಬಹುದು ಎಂದು ನನಗೆ ಖಚಿತವಿಲ್ಲ. ಹಲವಾರು ವಿಚಾರಗಳು ನಡೆಯುತ್ತಿದೆ. ಅದು ಎಲ್ಲರಿಗೂ ತಿಳಿದಿಲ್ಲ" ಎಂದು ಅನುಮಾನ ವ್ಯಕ್ತಪಡಿಸಿದರು.