ಮಂಗಳೂರು, ಜೂ09: ಕರಾವಳಿಯಲ್ಲಿ ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ನಿರಂತರ ಮಳೆಗೆ ಹಲವೆಡೆ ಮರಗಳು ಧರೆಗುರುಳಿದ್ದು, ಅನೇಕ ಮನೆಗಳಿಗೆ ಹಾನಿಯಾಗಿದೆ.
ಆರ್.ಟಿ.ಒ ಕಚೇರಿ ಬಳಿ ಮರಗಳು ರಸ್ತೆಗೆ ಉರುಳಿ ಬಿದ್ದಿದೆ. ಮಾತ್ರವಲ್ಲ, ಮಂಗಳೂರು ರೈಲು ನಿಲ್ದಾಣದ ಬಳಿಯೂ ಮರ ಉರುಳಿ ಬಿದ್ದಿದ್ದು, ತೆರವು ಕಾರ್ಯಾಚರಣೆ ನಡೆಯುತ್ತಿದೆ. ನಗರದ ಮಾರುಕಟ್ಟೆ ಸಮೀಪದ ಭವಂತಿ ರಸ್ತೆಯಲ್ಲಿ ಮನೆಗೆ ಹಾನಿಯಾಗಿದ್ದು, ಗೋಡೆ ಕುಸಿದು ಬಿದ್ದಿದೆ.
ಇವತ್ತು ಕೂಡ ಕರಾವಳಿಯಲ್ಲಿ ಭಾರಿ ಮಳೆ ಮುಂದುವರಿದಿದೆ. ಭಾರಿ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆ ಅವಾಂತರದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ದಕ್ಣಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ಹಲವೆಡೆ ಕಾಲೇಜುಗಳಿಗೂ ರಜೆ ಘೋಷಿಸಿವೆ. ಸುಬ್ರಹ್ಮಣ್ಯದ ಸ್ನಾನಘಟ್ಟದಲ್ಲಿ ನೀರು ತುಂಬಿ ಹರಿಯುತ್ತಿದೆ. ಕುಮಾರಧಾರ ನದಿಗೆ ನೂತನ ಸಂಪರ್ಕ ಸೇತುವೆ ನಿರ್ಮಾಣವಾಗಿರುವುದರಿಂದ ಕುಕ್ಕೆ ಭೇಟಿಗೆ ಅಡ್ಡಿ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಅವಧಿಗೂ ಮುನ್ನವೇ ರಾಜ್ಯಕ್ಕೆ ಆವರಿಸಿರುವ ಮುಂಗಾರು ಈಗಾಗಲೇ ಕರಾವಳಿಯನ್ನು ಆವರಿಸಿದೆ. ಕರಾವಳಿ ಸೇರಿದಂತೆ ಮಲೆನಾಡು, ಉತ್ತರ ಒಳನಾಡಿನಲ್ಲಿಯೂ ಮಳೆ ಹೆಚ್ಚಾಗಿದೆ. ಈಗಾಗಲೇ ಮಳೆಯಿಂದಾಗಿ ಕಂಗಾಲಾಗಿರುವ ಕರಾವಳಿ ಭಾಗದಲ್ಲಿ ಇನ್ನೂ ಎರಡು ಮೂರು ದಿನ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಇದೇ ಕಾರಣಕ್ಕೆ ಹೈ ಅಲರ್ಟ್ ಘೋಷಿಸಲಾಗಿದೆ. ಮಾತ್ರವಲ್ಲ, ಮಳೆ ಹೆಚ್ಚಾದ ಹಿನ್ನೆಲೆ ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಈಗಾಲೇ ಸೂಚಿಸಲಾಗಿದೆ.