ಉಡುಪಿ, ನ. 30 (DaijiworldNews/MB) : ರಾಷ್ಟ್ರೀಯ ಹೆದ್ದಾರಿ 169 (a) ಮಲ್ಪೆ ರಸ್ತೆಯು ಮೃತ್ಯು ಕೂಪ ಆಗಿ ಹೋಗಿತ್ತು. ಇನ್ನು ಇಂದ್ರಾಳಿಯ ರೈಲ್ವೆ ಸೇತುವೆ ಹಾಗೂ ಪರ್ಕಳ ರಸ್ತೆಯ ಸ್ಥಿತಿ ಅಂತೂ ಶೋಚನೀಯವಾಗಿತ್ತು. ಸದ್ಯ ಮಟ್ಟಿಗೆ ರಸ್ತೆ ಕಾಮಗಾರಿ ನಡೆಯದಿದ್ದರೂ ಪರವಾಗಿಲ್ಲ, ಕೊನೆಯ ಪಕ್ಷ ಅಲ್ಲಲ್ಲಿ ಆದ ಹೊಂಡ ಗುಂಡಿಯನ್ನಾದರೂ ಮುಚ್ಚಿ ತಾತ್ಕಾಲಿಕ ಪರಿಹಾರ ಕೊಡಿ ಎಂದು ಸಾರ್ವಜನಿಕರು ವಾಹನ ಚಾಲಕರು ಅಲವತ್ತು ಕೊಂಡಿದ್ದರು.















ವಿರೋಧ ಪಕ್ಷವಾದ ಕಾಂಗ್ರೆಸ್ ಕೂಡ ಇದರ ಮೇಲೆ ಪ್ರತಿಭಟನೆ ಮಾಡಿಯೇ ಬಿಟ್ಟಿದ್ದರು. ಮಣಿಪಾಲ - ತೀರ್ಥಹಳ್ಳಿ ರಸ್ತೆಯಂತೂ ಬ್ಯುಸಿ ಟ್ರಾಫಿಕ್ ಹೆದ್ದಾರಿ. ಪರ್ಕಳ ಜಂಕ್ಷನ್ ನಂತೂ ಬಾಟಲ್ ನೆಕ್ ಪ್ರದೇಶವಾಗಿಯೇ ಉಳಿದಿದೆ. ಇಲ್ಲಿ ಎರಡು ಕಡೆ ವಾಹನ ಸಂಚರಿಸುವಾಗ ಜೀವ ಕೈಯಲ್ಲಿ ಹಿಡಿದು ಹರಸಾಹಸ ಪಡಬೇಕು. ಹೊಸಬರಿಗೆ ಈ ರಸ್ತೆಯಲ್ಲಿ ಬರುವಾಗ ತಮ್ಮ ವಾಹನವನ್ನು ಹೇಗೆ ಬದಿಗೆ ಸರಿಸಬೇಕು ಎನ್ನುವುದೇ ಒಮ್ಮೆ ಗೊಂದಲವಾಗುತ್ತದೆ.
ಇಂದ್ರಾಳಿ ಬಳಿ ಹೋಗುವಾಗ ವಾಹನ ಚಾಲಕರಿಗೆ ರಸ್ತೆಯಲ್ಲಿ ಬಿದ್ದ ಹೊಂಡವನ್ನು ತಪ್ಪಿಸಿಕೊಂಡು ಹೋಗುವುದು ಎಂಬುದೇ ದೊಡ್ದ ಸಾಹಸವಾಗಿ ಪರಿಣಮಿಸಿತ್ತು. ಇದರ ಬಗ್ಗೆ ಜನಪ್ರತಿನಿಧಿಗಳೂ ಕೂಡ ಸಂಬಂಧ ಪಟ್ಟ ಇಲಾಖೆಗೆ ಮನವರಿಕೆ ಮಾಡಿದ್ದಾಗ್ಯೂ ಏನು ಕ್ರಮ ತೆಗೆದು ಕೊಂಡಿರಲಿಲ್ಕ.
ಆದರೆ ಇತ್ತೀಚಿಗೆ ಈ ರಸ್ತೆಯ ಕೆಲವು ಅಪಾಯಕಾರಿ ಹೊಂಡಗಳಿಗೆ ತಾತ್ಕಾಲಿಕ ಮುಕ್ತಿ ಸಿಕ್ಕಿದೆ. ಸದ್ಯಕ್ಕೆ ಅಲ್ಲಲ್ಲಿ ತೇಪೆ ಹಚ್ಚುವ ಕೆಲಸ ಮಾಡಲಾಗಿದೆ, ಆದರೂ ಪೂರ್ಣವಾಗಿ ಮುಕ್ತಿ ಸಿಕ್ಕಿಲ್ಲ. ಕಾಟಚಾರಕ್ಕಾಗಿ ಸಾರ್ವಜನಿಕರ ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಈ ರೈಲ್ವೆ ಸೇತುವೆಯ ನೀಲನಕಾಶೆ ಸಂಬಂಧ ಪಟ್ಟ ಇಲಾಖೆಗೆ, ಸರಕಾರಕ್ಕೆ ಕಳುಹಿಸಲಾಗಿದೆ. ಆದರೆ ಯಾವಾಗ ಅನುಮೋದನೆ ಸಿಗುತ್ತದೆ ಎಂಬುದೇ ಪ್ರಶ್ನಾರ್ತಕ.
ಈ ಹೊಂಡ ತುಂಬಿದ ರಸ್ತೆಯ ಬಗ್ಗೆ ಅನೇಕರು ಚಿತ್ರ ಹಾಕಿ ಟೀಕೆಗಳ ವ್ಯಕ್ತಪಡಿಸಿದ್ದರು. ಅಂತೂ ಕೊನೆಗೂ ಈ ಹೊಂಡಗಳಿಗೆ ಮುಕ್ತಿ ಸಿಕ್ಕಿದೆ. ಆದರೂ ಇನ್ನೂ ಅಪಾಯಕಾರಿ ಹೊಂಡಗಳು ಬಾಯ್ದೆರದೇ ಇದೆ. ಇನ್ನು ರಸ್ತೆಗಾಗಿ ಕಡಿದು ಹಾಕಿದ ಸಂಪರ್ಕ ರಸ್ತೆ ಇನ್ನೂ ಹಾಗೆಯೇ ಇದೆ. ಸದ್ಯಕ್ಕೆ ಹೊಂಡ ಮುಚ್ಚಿರುವುದಕ್ಕೆ ಸಾರ್ವಜನಿಕ ರು ಸ್ವಲ್ಪ ಸಮಾಧಾನ ಪಟ್ಟಿದ್ದಾರೆ.