ಮಂಗಳೂರು, ನ. 30 (DaijiworldNews/MB) : ಮೀನುಗಾರನು ಮೀನು ಹಿಡಿಯಲು ಹರಡುತ್ತಿದ್ದ ಬಲೆಗೆ ಸಿಕ್ಕಿಹಾಕಿಕೊಂಡು ಪ್ರಾಣ ಕಳೆದುಕೊಂಡ ದುರಂತ ಘಟನೆ ನವೆಂಬರ್ 29 ರ ರವಿವಾರ ಇಲ್ಲಿನ ಬೈಕಂಪಾಡಿ ಬಳಿ ಸಮುದ್ರದಲ್ಲಿ ಸಂಭವಿಸಿದೆ.

ಮೃತ ವ್ಯಕ್ತಿಯನ್ನು ಬೈಕಂಪಾಡಿಯ ಹೊಸಹಿತ್ಲು ನಿವಾಸಿ ನವೀನ್ ಕರ್ಕೇರ (32) ಎಂದು ಗುರುತಿಸಲಾಗಿದೆ.
ಸಮುದ್ರದಲ್ಲಿ ಸ್ವಲ್ಪ ದೂರದಲ್ಲಿ ತನ್ನ ದೋಣಿಯಲ್ಲಿ ಪ್ರಯಾಣಿಸುತ್ತಾ ಮೀನಿಗೆ ಬಲೆ ಹಾಕುತ್ತಿದ್ದರು. ಈ ಸಂದರ್ಭದಲ್ಲಿ ಬಲೆಗೆ ಅವರ ಕಾಲು ಬೆರಳು ಸಿಲುಕಿದ್ದು ಅವರು ನೀರಿಗೆ ಬಿದ್ದು ಮುಳುಗಿದ್ದಾರೆ. ಅವರು ನುರಿತ ಈಜುಗಾರರಾಗಿದ್ದರೂ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ, ಅವನು ನೀರಿನಲ್ಲಿ ಈಜಿ ದಡ ಸೇರಲು ಸಾಧ್ಯವಾಗಲಿಲ್ಲ.
ಕೂಡಲೇ ಮತ್ತೊಂದು ದೋಣಿಯಲ್ಲಿದ್ದ ಮೀನುಗಾರರು ಆತನ ರಕ್ಷಣೆಗೆ ಧಾವಿಸಿದ್ದು ಕೂಡಲೇ ಅವರನ್ನು ಕರೆತಂದು ಆಸ್ಪತ್ರೆಗೆ ದಾಖಲಿಸಿದರು. ಆದರೆ ಅವರು ಅಷ್ಟರಲ್ಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದರು.
ನವೀನ್ ಅವಿವಾಹಿತರಾಗಿದ್ದು ಅವರು ಕುಟುಂಬದ ನಾಲ್ಕನೇ ಮಗ. ಅವರ ತಂದೆ ಮೃತರಾಗಿದ್ದು ಅವರ ಮೂವರು ಸಹೋದರರು ಕೂಡಾ ದುರಂತವೊಂದರಲ್ಲಿ ಸಾವನ್ನಪ್ಪಿದ್ದಾರೆ. ಓರ್ವ ಸಹೋದರ ಮಡಿಕೇರಿಯಲ್ಲಿ ಅಪಘಾತಕ್ಕೀಡಾಗಿದ್ದರು. ಇನ್ನೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರನೇಯ ಸಹೋದರ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಈಗ ಇವರು ಕೂಡಾ ಸಾವನ್ನಪ್ಪಿದ್ದು ಅವರ ವಯಸ್ಸಾದ ತಾಯಿ ಒಬ್ಬಂಟಿಯಾಗಿದ್ದಾರೆ.
ನವೀನ್ ಸ್ನೇಹಪರ ವ್ಯಕ್ತಿಯಾಗಿದ್ದು ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಅವರು ನವಜ್ಯೋತಿ ಸಂಘಟನೆಯ ಸದಸ್ಯರಾಗಿದ್ದರು.