ಮಂಗಳೂರು, ನ.30 (DaijiworldNews/PY): "ನಗರದ ಪ್ರಮುಖ ಗೋಡೆಗಳಲ್ಲಿ ಒಂದು ವಾರದ ಅವಧಿಯಲ್ಲಿ ಎರಡು ಕಡೆಗಳಲ್ಲಿ ಪ್ರಚೋದನಾಕಾರಿ ಬರಹಗಳು ಕಂಡು ಬಂದಿದ್ದು, ಬಿಜೆಪಿಗರು ಕೇವಲ ಬಾಯಿ ಮಾತಿನಲ್ಲಿ ಮಾತ್ರ ಪ್ರಚೋದನಾಕಾರಿ ಗೋಡೆ ಬರಹ ಬರೆದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳುದನ್ನು ಬಿಟ್ಟು ಕೂಡಲೇ ಆರೋಪಿಗಳನ್ನು ಬಂಧಿಸುವ ಕೆಲಸವನ್ನು ಮಾಡಬೇಕಾಗಿದೆ. ಇಲ್ಲವಾದರೆ ಸರಕಾರದ ಅವ್ಯವಸ್ಥೆಯ ವಿರುದ್ಧ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ" ಎಂದು ದ.ಕ ಜಿಲ್ಲಾ ಯುವ ಜನತಾದಳ ಎಚ್ಚರಿಕೆ ನೀಡಿದೆ.

"ನಗರದ ಪ್ರಮುಖ ಗೋಡೆಗಳಲ್ಲಿ ಒಂದು ವಾರದ ಅವಧಿಯಲ್ಲಿ ಎರಡು ಕಡೆಗಳಲ್ಲಿ ಪ್ರಚೋದನಾಕಾರಿ ಬರಹಗಳು ಕಂಡುಬಂದಿದ್ದು, ಇದುವರೆಗೆ ಯಾರನ್ನೂ ಕೂಡಾ ಬಂಧಿಸುವ ಕೆಲಸ ಪೊಲೀಸ್ ಇಲಾಖೆಯಿಂದ ನಡೆದಿಲ್ಲ. ಈ ನಡುವೆ ಕೆಲವೊಂದು ಸಂಘಟನೆಗಳು ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ" ಎಂದು ದ.ಕ ಜಿಲ್ಲಾ ಯುವ ಜನತಾದಳದ ಅಧ್ಯಕ್ಷ ಅಕ್ಷಿತ್ ಸುವರ್ಣ ಹೇಳಿದ್ದಾರೆ.
"ಪ್ರಸ್ತುತ ಬಿಜೆಪಿ ನೇತೃತ್ವದ ಸರಕಾರ ಇರುವಾಗ ಹಿಂದೂ ಸಂಘಟನೆಗಳು ಯಾರ ವಿರುದ್ಧ ಪ್ರತಿಭಟನೆ ಮಾಡಿದ್ದು ಎನ್ನುವುದು ಪ್ರಶ್ನೆಯಾಗಿದೆ. ಹಿಂದೆಲ್ಲಾ ಎಲ್ಲಾ ಸರಕಾರಗಳು ಇರುವಾಗ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವ ಬಿಜೆಪಿಗರಿಗೆ ಈಗ ಜಿಲ್ಲೆಯಲ್ಲಿ ಪ್ರತಿನಿತ್ಯ ಕೊಲೆಗಳು, ಪ್ರಚೋದನಾಕಾರಿ ಬರಹಗಳು ಕಂಡುಬರುತ್ತಿರುವ ಸಂದರ್ಭದಲ್ಲಿ ಜಿಲ್ಲೆಯಲ್ಲಿರುವ ಏಳು ಬಿಜೆಪಿ ಶಾಸಕರು, ಸಂಸದರು ಏಕೆ ಮೌನವಾಗಿದ್ದಾರೆ?" ಎಂದು ಪ್ರಶ್ನಿಸಿದ್ದಾರೆ.
"ಜಿಲ್ಲೆಯಲ್ಲಿ ಯಾವುದೇ ಕೊಲೆಯಾಗಿದ್ದರೂ ಓಡಿ ಬರುವ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಈಗ ಜಿಲ್ಲೆಯಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯ ಅರಿವಿಲ್ಲದಿರುವುದು ಖೇದಕರ ಸಂಗತಿ. ಅವರದೇ ಬಿಜೆಪಿ ಸರಕಾರ ಇರುವಾಗ ಆರೋಪಿಗಳನ್ನು ಬಂಧಿಸಲು ಶೋಭಾ ಅವರು ಇತ್ತೀಚೆಗೆ ಉಡುಪಿಯಲ್ಲಿ ಮಾಧ್ಯಮಗಳ ಮುಂದೆ ಆಗ್ರಹಿಸಿದ್ದು ಹಾಸ್ಯಾಸ್ಪದ. ಅವರು ಆಗ್ರಹಿಸುವ ಬದಲು ಕಾರ್ಯಾಚರಣೆ ನಡೆಸಿ ಬಂಧಿಸಲು ಆದೇಶ ಮಾಡುವುದು ಅವರ ಜವಾಬ್ದಾರಿ" ಎಂದಿದ್ದಾರೆ.
"ಪೊಲೀಸ್ ಇಲಾಖೆ ಗೋಡೆ ಬರಹದ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕಾಗಿದ್ದು, ಇಲ್ಲವಾದರೆ ಮುಂದೆ ಇಂತಹ ಪ್ರಚೋದನಾಕಾರಿ ಬರಹಗಳು ಜಿಲ್ಲೆಯ ಶಾಂತಿ ಸುವ್ಯವಸ್ಥೆ ಕದಡುವ ಆತಂಕವಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಇಲ್ಲವಾದರೆ ಸರಕಾರದ ಅವ್ಯವಸ್ಥೆಯ ವಿರುದ್ಧ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ" ಎಂದು ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.