ಕುಂದಾಪುರ, ಸೆ25 : ದೇಶದಲ್ಲಿ ಆರ್ಥಿಕತೆ ಬಿಗಡಾಯಿಸುತ್ತಿದ್ದರೂ ಕರ್ನಾಟಕ ರಾಜ್ಯ ಕೈಗಾರಿಕೆ, ಉದ್ಯೋಗವಕಾಶಗಳ ಮೂಲಕ ಕರ್ನಾಟಕ ರಾಷ್ಟ್ರದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಪ್ರಪಂಚದ ಜನ ಕರ್ನಾಟಕದಲ್ಲಿ ಹಣ ಹೂಡಿಕೆಗೆ ಮುಂದೆ ಬರುತ್ತಿದ್ದಾರೆ. ಆರ್ಥಿಕ ತಜ್ಞ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಮರ್ಥವಾಗಿ ರಾಜ್ಯವನ್ನು ಮುನ್ನೆಡೆಸುತ್ತಿದ್ದಾರೆ. ಹಸಿವು ಮುಕ್ತ ಕರ್ನಾಟಕ ಧ್ಯೇಯದಡಿ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಮೀರಿ ಉಚಿತವಾಗಿ ಅಕ್ಕಿಯನ್ನು ನೀಡಿದ್ದು ಕಾಂಗ್ರೆಸ್ ನೇತೃತ್ವದ ಸರ್ಕಾರ ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದರು.
ಅವರು ಕುಂದಾಪುರದ ಟಿ.ಟಿ.ರಸ್ತೆಯ ಗಣೇಶ್ ಶೇರುಗಾರ್ ಮನೆ ವಠಾರದಲ್ಲಿ ಶನಿವಾರ ನಡೆದ ಮನೆಮನೆಗೆ ಕಾಂಗ್ರೆಸ್ ನಡಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಕೈಪಿಡಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.ಕಳೆದ ನಾಲ್ಕುವರೆ ವರ್ಷಗಳಲ್ಲಿ ರಾಜ್ಯ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಜನತೆಗೆ ನೀಡಿದೆ. ಚುನಾವಣೆಯ ಪ್ರನಾಳಿಕೆಯಲ್ಲಿ ಸೂಚಿಸಿದ ಕಾರ್ಯಕ್ರಮಗಳಿಗಿಂತ ಹೆಚ್ಚು ಯೋಜನೆಗಳನ್ನು ರಾಜ್ಯಕ್ಕೆ ನೀಡಲಾಗಿದೆ. ಸರ್ಕಾರದ ಕಾರ್ಯಕ್ರಮಗಳನ್ನು ಪ್ರತಿ ಮನೆಗೂ ತಲುಪಿಸಬೇಕಾದ ಜವಬ್ದಾರಿ ಕಾಂಗ್ರೆಸ್ನ ಕಾರ್ಯಕರ್ತರಿಗಿದೆ. ಮತ್ತೆ ಕಾಂಗ್ರೆಸ್ಗೆ ಅಧಿಕಾರ ನೀಡುವಲ್ಲಿ ಪ್ರತಿಯೊಬ್ಬರೂ ಕೂಡಾ ಶ್ರಮಿಸಬೇಕಾಗಿದೆ ಎಂದರು.
ಆ ಬಳಿಕ ಬೈಂದೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಮನೆ ಮನೆ ಕಾಂಗ್ರೆಸ್ ಕಾರ್ಯಕ್ರಮದಲ್ಲೂ ಬಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಹೆಮ್ಮಾಡಿಯ ಲಕ್ಷ್ಮೀನಾರಾಯಣ ದೇವಳದ ವಠಾರದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು ಮುಂದಿನ ಪೀಳಿಗೆಗೆ ಸರಿಯಾದ ತರಬೇತಿ ನೀಡಿ, ಅವರನ್ನು ಮುಂದಿನ ನಾಯಕರನ್ನಾಗಿ ಮಾಡುವ ಕೆಲಸ ಮಾಡಬೇಕಾಗಿದೆ ಎಂದರು. ಬೈಂದೂರು ಕ್ಷೇತ್ರ ಜಿಲ್ಲೆಯಲ್ಲೇ ಅತ್ಯಂತ ಹಿಂದುಳಿದ ಕ್ಷೇತ್ರವಾಗಿದ್ದು ಇದರ ಅಭಿವೃದ್ದಿಗೆ ಅಧಿಕ ಪ್ರಮಾಣದ ಅನುದಾನಗಳು ಬೇಕಾಗುತ್ತದೆ. ಅದನ್ನು ಶಾಸಕ ಗೋಪಾಲ ಪೂಜಾರಿ ಸೂಕ್ತವಾಗಿ ಮಾಡಿದ್ದಾರೆ ಎಂದು ತಿಳಿಸಿದರು.