ಉಡುಪಿ, ಡಿ.01 (DaijiworldNews/MB) : "ಜಿಲ್ಲೆಯಲ್ಲಿ ರೋಗಲಕ್ಷಣದ ಕೊರೊನಾವೈರಸ್ ಪ್ರಕರಣಗಳು ಶೇ. 9 ರಷ್ಟಿದೆ. ಆಸ್ಪತ್ರೆಯಲ್ಲಿ ಸುಮಾರು 43 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. 176 ಮಂದಿ ಹೋಂ ಕ್ವಾರಂಟೈನ್ನಲ್ಲಿ ಇದ್ದಾರೆ. 219 ಸಕ್ರಿಯ ಪ್ರಕರಣಗಳಾಗಿವೆ. ಮೂರು ಜನರನ್ನು ಐಸಿಯುನಲ್ಲಿ ಇರಿಸಲಾಗಿದೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ 87 ಐಸಿಯು ಬೆಡ್ಗಳು ಖಾಲಿ ಇವೆ. ಹಾಗೆಯೇ ಕಳೆದ 20 ದಿನಗಳಲ್ಲಿ ಯಾವುದೇ ಕೊರೊನಾ ಸಾವು ಸಂಭವಿಸಿಲ್ಲ" ಎಂದು ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಹೆಚ್ಚಿನ ರೋಗಿಗಳು ಹೋಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ರೋಗಲಕ್ಷಣವುಳ್ಳ ಪ್ರಕರಣಗಳಿಗಿಂತ ರೋಗಲಕ್ಷಣವಿಲ್ಲದ ಪ್ರಕರಣಗಳು ಅಧಿಕವಾಗಿದೆ. ಪಾಸಿಟಿವ್ ಪ್ರಕರಣಗಳು ಕಡಿಮೆಯಾಗುತ್ತಿದೆ. ರಾಷ್ಟ್ರೀಯ ಅಂಕಿಅಂಶಗಳನ್ನು ಹೋಲಿಸಿದಾಗ, ಕರ್ನಾಟಕವು ಮಹಾರಾಷ್ಟ್ರದ ನಂತರ ಅಂದರೆ ಎರಡನೇ ಸ್ಥಾನದಲ್ಲಿದೆ. ನಿನ್ನೆಯವರೆಗೆ ಕರ್ನಾಟಕದಲ್ಲಿ 8.83 ಲಕ್ಷ ಕೊರೊನಾವೈರಸ್ ಪ್ರಕರಣಗಳು ವರದಿಯಾಗಿದ್ದು ಚೇತರಿಕೆ ಪ್ರಮಾಣವು ಶೇ. 96 ರಷ್ಟಿದೆ. ದೇಶದಲ್ಲಿ ಸಾವಿನ ಪ್ರಮಾಣವು ಶೇಕಡಾ 1.6 ಕ್ಕೆ ಇಳಿದಿದೆ. ಪ್ರತಿ ಮಿಲಿಯನ್ಗೆ 1.67 ಲಕ್ಷ ಪರೀಕ್ಷೆ ನಡೆಸಲಾಗಿದೆ" ಎಂದು ಹೇಳಿದರು.
"ರವಿವಾರದವರೆಗೆ 22,675 ಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಗಿದೆ. ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಕೊರೊನಾವೈರಸ್ ಅಂಕಿಅಂಶಗಳಿಗೆ ಹೋಲಿಸಿದರೆ ಒಟ್ಟು ಚೇತರಿಕೆ ಪ್ರಮಾಣ 98.3% ರಷ್ಟಿದೆ. ಕೊರೊನಾ ಸಾವಿನ ಪ್ರಮಾಣ 0.8% ವಿದೆ. ಪ್ರತಿದಿನ ಸರಾಸರಿ 2,500 ಮಾದರಿಗಳನ್ನು ಪರೀಕ್ಷಿಸಲಾಗುತ್ತಿದೆ. ಕಳೆದ ಎರಡು ತಿಂಗಳಿನಿಂದ, ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿವೆ. ಒಟ್ಟು ಸಕಾರಾತ್ಮಕ ಪ್ರಕರಣಗಳು ಆಗಸ್ಟ್ನಲ್ಲಿ 400 ಆಗಿದ್ದವು. ಬಳಿಕ ದಿನಕ್ಕೆ 200 ಕೊರೊನಾ ಪ್ರಕರಣಕ್ಕೆ ಇಳಿದಿದೆ. ಕಳೆದ ಎರಡು ತಿಂಗಳುಗಳಿಂದ ಕೊರೊನಾ ಪಾಸಿಟಿವ್ ದರವು ಶೇ. 25-30ರಷ್ಟಿದೆ. ಆದರೆ ನವೆಂಬರ್ನಲ್ಲಿ ಪಾಸಿಟಿವ್ ಪ್ರಕರಣಗಳ ಪ್ರಮಾಣವು ಶೇ. 1 ಕ್ಕೆ ಇಳಿದಿದೆ. ನವೆಂಬರ್ನಲ್ಲಿ ಸರಾಸರಿ 20 ಕೊರೊನಾ ಪ್ರಕರಣಗಳು ದೃಢಪಡುತ್ತಿದೆ" ಎಂದು ಹೇಳಿದರು.
"ಆರಂಭದಲ್ಲಿ, ಇತರ ಸ್ಥಳಗಳಿಂದ ವಲಸೆ ಬಂದ ಜನರಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿವೆ. ಜುಲೈ ನಂತರ ಸ್ಥಳೀಯ ಜನರಲ್ಲಿ ಕೊರೊನಾ ದೃಢಪಟ್ಟಿದೆ. ಗರಿಷ್ಠ ಹಂತಕ್ಕೆ ತಲುಪಿದ ಬಳಿಕ ವೈರಸ್ ಹರಡುವ ಪ್ರಮಾಣವು ನಿಯಂತ್ರಣಕ್ಕೆ ಬಂದಿದೆ" ಎಂದರು.
ಇನ್ನು ''ನವೆಂಬರ್ 7 ರಂದು ಕೊರೊನಾ ರೋಗಿಯೋರ್ವರು ಸಾವನ್ನಪ್ಪಿದ್ದು ಇದು ಕೊನೆಯ ಕೊರೊನಾ ಸಾವಿನ ಪ್ರಕರಣವಾಗಿದೆ. ಬಳಿಕ 20 ದಿನಗಳಿಂದ ಯಾವುದೇ ಕೊರೊನಾ ಸಾವು ಸಂಭವಿಸಿಲ್ಲ'' ಎಂದು ತಿಳಿಸಿದರು.