ಉಡುಪಿ, ಡಿ.01 (DaijiworldNews/PY): 2022ರ ಜನವರಿ 18ರಂದು ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಪೀಠಾರೋಹಣ ಮಾಡಲಿರುವ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರು ಪರ್ಯಾಯ ಪೂರ್ವಭಾವಿಯಾಗಿ ನಡೆಸುವ ಪ್ರಥಮ ಮೂಹೂರ್ತಗಳಲ್ಲಿ ಒಂದಾದ ಬಾಳೆ ಮುಹೂರ್ತವನ್ನು ನ.30ರ ಸೋಮವಾರದಂದು ಶ್ರೀಕೃಷ್ಣಾಪುರದ ಮಠದ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರು ನಿರ್ವಹಿಸಿದರು.







ಬಾಳೆ ಮುಹೂರ್ತವನ್ನು ಧನುರ್ಲಗ್ನ ಮುಹೂರ್ತದಲ್ಲಿ ಪದ್ಧತಿಯ ಪ್ರಕಾರ ನಡೆಸಲಾಯಿತು. ಕೃಷ್ಣಾಪುರ ಮಠದ ಹಿತ್ತಲಿನಲ್ಲಿ ತೆಂಗಿನ ಸಸಿ, ಬಾಳೆ ಮರ ಹಾಗೂ ಕಬ್ಬಿನ ಸಸಿಗಳನ್ನು ನೆಡಲಾಯಿತು.
ಇದಕ್ಕೂ ಮುನ್ನ ಕೃಷ್ಣಾಪುರ ಮಠದ ದೇವರ ಸನ್ನಿಧಿಯಲ್ಲಿ ಅನಂತೇಶ್ವರ, ಚಂದ್ರಮೌಳೇಶ್ವರ, ಶ್ರೀಮುಖ್ಯಪ್ರಾಣ, ಸುಬ್ರಹ್ಮಣ್ಯ ದೇಗುಲ, ನವಗ್ರಹ ದೇವಾಲಯ ಹಾಗೂ ವೃಂದಾವನದಲ್ಲಿ ಸಾಮೂಹಿಕ ಪ್ರಾರ್ಥನೆ ಹಾಗೂ ಪೂಜೆ ನಡೆಸಲಾಯಿತು.
ಸಾಮೂಹಿಕ ಪ್ರಾರ್ಥನೆಯ ಬಳಿಕ ಬಾಳೆ ಸಸಿಗಳನ್ನು ಮೆರವಣಿಗೆಯ ಮೂಲಕ ಸಾಂಪ್ರದಾಯಿಕವಾಗಿ ತರಲಾಯಿತು. ಈ ವೇಳೆ ನವಗ್ರಹ ದಾನಾದಿಗಳನ್ನು ಇತರ ಮಠಗಳಿಗೆ ನೀಡಲಾಯಿತು. ಶ್ರೀನಿವಾಸ ಉಪಾಧ್ಯಾಯ ಅವರು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು.
ಬಳಿಕ ಆಶೀರ್ವಚನ ನೀಡಿದ ಕೃಷ್ಣಾಪುರ ಮಠದ ಸ್ವಾಮೀಜಿ, "ಮುಂದಿನ ಎರಡು ವರ್ಷಗಳ ಪರ್ಯಾಯವನ್ನು ಯಶಸ್ವಿಯಾಗಿ ಸಾಧಿಸಲು ಎಲ್ಲರ ಸಹಕಾರವನ್ನು ಬಯಸುತ್ತೇನೆ. ಒಬ್ಬ ವ್ಯಕ್ತಿ ಅಂತಹ ಮಹತ್ತರವಾದ ಕಾರ್ಯವನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ನಿಮ್ಮೆಲ್ಲರ ಉಪಸ್ಥಿತಿ ನನಗೆ ವಿಶ್ವಾಸ ತುಂಬಿದೆ" ಎಂದರು.
"ಕಳೆದ ಹಲವು ಶತಮಾನಗಳಿಂದ ನಮ್ಮ ಗುರುಗಳು ಮತ್ತು ಪೂರ್ವಜರು ಹಸ್ತಾಂತರಿಸಿರುವ ನಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಒತ್ತು ನೀಡಲು ನಾನು ಆದ್ಯತೆ ನೀಡುತ್ತೇನೆ. ಪ್ರಕೃತಿಯ ಆರಾಧನೆ ಎಂದರೆ ದೇವರ ಆರಾಧನೆ. ಇದು ಒಂದು ದೊಡ್ಡಯಜ್ಞ. ಗುರು ವಾದಿರಾಜರ ಪ್ರಕಾರ, ನೇತ್ರೋತ್ಸವ, ಶ್ರವಣೋತ್ಸವ, ಅರ್ಥೋತ್ಸವ, ಭೋಜನೋತ್ಸವ ಮತ್ತು ಮಹೋತ್ಸವ ಎಂದು ಕರೆಯಲ್ಪಡುವ ಪಂಚ ಮಹೋತ್ಸವಗಳಿವೆ ಮತ್ತು ಮುಂದಿನ ಕಾರ್ಯಕ್ರಮಗಳಿಗೆ ಅದೇ ರೀತಿಯ ಬೆಂಬಲವನ್ನು ಮುಂದುವರಿಸಬೇಕೆಂದು ನಾನು ಬಯಸುತ್ತೇನೆ" ಎಂದು ಹೇಳಿದರು.
"ಕೊರೊನಾ ಹಿನ್ನೆಲೆ ಅನೇಕ ಜನರನ್ನು ಆಹ್ವಾನಿಸಲಿಲ್ಲ. ಭಕ್ತರು ಪ್ರಸ್ತುತ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. 2022 ರಿಂದ ಪ್ರಾರಂಭವಾಗುವ ಸುಗಮವಾದ ಪಯಾಯಕ್ಕಾಗಿ ನಾನು ಭಗವಾನ್ ಶ್ರೀ ಕೃಷ್ಣನ ಆಶೀರ್ವಾದವನ್ನು ಬಯಸುತ್ತೇನೆ" ಎಂದರು
ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್, ರಘುರಾಮ ಆಚಾರ್ಯ, ರಘುಪತಿ ಆಚಾರ್ಯ, ಯು ಕೆ ರಾಘವೇಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು..