ಮೂಲ್ಕಿ, ಜೂ 10: ರಾಷ್ಟ್ರೀಯ ಹೆದ್ದಾರಿ ೬೬ರ ಮೂಲ್ಕಿ ಬಳಿಯ ಕೊಲ್ನಾಡುವಿನಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದು ಕಾರಿನಲ್ಲಿದ್ದ ಮಹಿಳೆ ಸಾವನ್ನಪ್ಪಿದ ಘಟನೆ ಜೂ 09ರ ಶನಿವಾರ ನಡೆದಿದೆ.
ಅಪಘಾತದಲ್ಲಿ ಸಾವನ್ನಪ್ಪಿದ ಮಹಿಳೆಯನ್ನು ಬಪ್ಪನಾಡು ನಿವಾಸಿ ಅಪ್ಪಿ ಶೇರಿಗಾರ್ ಎಂದು ಗುರುತಿಸಲಾಗಿದೆ. ಇವರು ಸುರತ್ಕಲ್ನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋದವರು ಹಿಂತಿರುಗಿ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಹೆದ್ದಾರಿಯಲ್ಲಿದ್ದ ಮಳೆ ನೀರು ಲಾರಿಯೊಂದರಿಂದ ಚಿಮ್ಮಿ ಕಾರಿನ ಮೇಲೆ ಹಾರಿದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಚರಂಡಿಗೆ ಡಿಕ್ಕಿ ಹೊಡೆದು ಸುಮಾರು 10 ಅಡಿ ಆಳಕ್ಕೆ ಬಿದ್ದಿದೆ. ಕಾರಿನಲ್ಲಿ ಅಪ್ಪಿ ಹಾಗೂ ಅವರ ಮೊಮ್ಮಗ ತುಷಾರ್ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ತಲೆಗೆ ಗಂಭೀರ ಗಾಯವಾಗಿದ್ದ ಅಪ್ಪಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು ಎಂದು ಪ್ರಕರಣವನ್ನು ದಾಖಲಿಸಿರುವ ಮಂಗಳೂರು ಉತ್ತರ ವಲಯದ ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಗಾಯಾಳು ತುಷಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಾಲಕ ಸುರೇಂದ್ರ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾನೆ.