ಮಂಗಳೂರು, ಡಿ. 01 (DaijiworldNews/HR): ರಾಜ್ಯದಲ್ಲಿ ಮೊದಲ ಬಾರಿಗೆ ಮಕ್ಕಳಿಲ್ಲದ ದಂಪತಿಗಳಿಗೆ ಮಕ್ಕಳನ್ನು ಪಡೆಯಲು ದಕ್ಷಿಣ ಕನ್ನಡ ಜಿಲ್ಲೆಯ ಆಯುಷ್ ಇಲಾಖೆ ಪರಿಚಯಿಸಿದ ಮಹತ್ವಾಕಾಂಕ್ಷೆಯ 'ಸೃಷ್ಟಿ' ಯೋಜನೆಯಡಿ ಕೈಗೊಂಡ ಪ್ರಯೋಗವು ಫಲ ಪಡೆದಿದ್ದು, ಹೋಮಿಯೋಪತಿ ಚಿಕಿತ್ಸೆಯಿಂದ ಮಗು ಜನಿಸಿದೆ.

ಮದುವೆಯಾಗಿ ಒಂಬತ್ತು ವರ್ಷಗಳಾದರೂ ಮಕ್ಕಳಾಗದ ತರೀಕೆರೆಯ ರಮೇಶ್-ಶಶಿಕಲಾ ದಂಪತಿಗೆ ನವೆಂಬರ್ 28 ರಂದು ಆರೋಗ್ಯಕರ 3.3 ಕೆಜಿ ಮಗು ಜನನವಾಗಿದೆ.
ಮಗುವಿಗಾಗಿ ಹಲವಾರು ಚಿಕಿತ್ಸೆಗಳನ್ನು ಮಾಡಿದರು ಕೂಡ ಯಶಸ್ವಿಯಾಗದೆ ರಮೇಶ್-ಶಶಿಕಲಾ ದಂಪತಿಗಳು ಆಯುಷ್ ಇಲಾಖೆಯ 'ಸೃಷ್ಟಿ' ಯೋಜನೆಯ ಬಗ್ಗೆ ತಿಳಿದುಕೊಂಡ ನಂತರ ಡಿಸೆಂಬರ್ನಲ್ಲಿ ಚಿಕಿತ್ಸೆ ಪ್ರಾರಂಭಿಸಿದರು. ಬಳಿಕ ಫೆಬ್ರವರಿಯಲ್ಲಿ ಶಶಿಕಲಾ ಗರ್ಭಿಣಿಯಾಗಿ ತರೀಕೆರೆಯ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನನ ನೀಡಿದ್ದಾರೆ ಎಂದು ಯೆನೆಪೋಯ ಹೋಮಿಯೋಪತಿ ಆಸ್ಪತ್ರೆಯ ಹೆರಿಗೆ ವಿಭಾಗದ ಡಾ.ಕಿರಣ್ ಶಶಿಕಾಂತ್ ಹೇಳಿದ್ದಾರೆ.
ತಪಾಸಣೆಯ ಸಮಯದಲ್ಲಿ ಸಮಸ್ಯೆಯನ್ನು ಪತ್ತೆಹಚ್ಚಿ ಅಲೋಪತಿ ಮತ್ತು ಆಯುರ್ವೇದ ಚಿಕಿತ್ಸೆ ಸಂಪೂರ್ಣವಾಗಿ ನಿಲ್ಲಿಸಿ, ದಂಪತಿಗಳಿಗೆ ಹೋಮಿಯೋಪತಿ ಚಿಕಿತ್ಸೆ ನೀಡಲಾಗಿದೆ ಎಂದರು.
ಯೆನೆಪೋಯ ಹೋಮಿಯೋಪತಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸಹಯೋಗದೊಂದಿಗೆ ಜಿಲ್ಲಾ ಆಯುಷ್ ಆಸ್ಪತ್ರೆಯಿಂದ 'ಸೃಷ್ಟಿ' ಯೋಜನೆಯನ್ನು ಪ್ರಾರಂಭಿಸಿ ಇದನ್ನು 29 ಆಗಸ್ಟ್ 2019 ರಂದು ಕೇಂದ್ರ ಆಯುಷ್ ಕೇಂದ್ರ ಸಚಿವ ಶ್ರೀಪಾದ್ ಯಾಸ್ಸೋ ನಾಯಕ್ ಅವರು ಚಾಲನೆ ನೀಡಿದರು.
ಸೃಷ್ಟಿ ಹೋಮಿಯೋಪತಿ ಮಕ್ಕಳಾಗದ ದಂಪತಿಗಳಿಗೆ ಭರವಸೆಯ ದಾರಿದೀಪವಾಗಿದೆ. ಆಸ್ಪತ್ರೆಯ ಮೂವತ್ತೆರಡು ತಜ್ಞ ವೈದ್ಯರು ಮಹಿಳೆಯರು ಮತ್ತು ಪುರುಷರಲ್ಲಿ ಬಂಜೆತನಕ್ಕೆ ಉಚಿತ ತಪಾಸಣೆ ಮತ್ತು ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಮಕ್ಕಳಿಲ್ಲದ ನಲವತ್ತೆರಡು ಜನರು ಇಲ್ಲಿ ಚಿಕಿತ್ಸೆ ಪಡೆಯಲು ಪ್ರಾರಂಭಿಸಿದ್ದಾರೆ ಮತ್ತು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಸೇರಿದ ಜನರಿಗೆ ಈ ಯೋಜನೆ ಪ್ರಕಾಶಮಾನವಾದ ಕಿರಣದ ಭರವಸೆಯಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಮೊಹಮ್ಮದ್ ಇಕ್ಬಾಲ್ ಹೇಳುತ್ತಾರೆ.
ಸರ್ಕಾರಿ ವೆನ್ಲಾಕ್ ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಈಗ ಚಿಕಿತ್ಸೆ ನೀಡಲಾಗುತ್ತಿದ್ದು, ಆಸ್ಪತ್ರೆಯ ಪಕ್ಕದಲ್ಲಿ ನಿರ್ಮಾಣವಾಗುವ ಹೊಸ ಸುಸಜ್ಜಿತ ಆಯುಷ್ ಕಟ್ಟಡದಲ್ಲಿ ಫರ್ಟಿಲಿಟಿ ಕೇರ್ ಸೆಂಟರ್ ಕಾರ್ಯನಿರ್ವಹಿಸಲು ಪ್ರಾರಂಭಿಸ ಬೇಕಿತ್ತು, ಆದರೆ ಕೊರೊನಾ ಸಮಸ್ಯೆಯಿಂದಾಗಿ ಸದ್ಯ ಕಾರ್ಯರೂಪಕ್ಕೆ ಬಂದಿಲ್ಲ.