ಮಂಗಳೂರು, ಡಿ.01 (DaijiworldNews/PY): "ಕೊರೊನಾದಿಂದ ದೇಶದಾದ್ಯಾಂತ ಲಾಕ್ಡೌನ್ ಜಾರಿ ಮಾಡಿದ ಹಿನ್ನೆಲೆ ವ್ಯಾಪಾರಿಗಳು ಉದ್ಯೋಗವಿಲ್ಲದೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಮತ್ತೆ ವ್ಯಾಪಾರ ಕೈಗೊಳ್ಳಲು ತುರ್ತು ಆರ್ಥಿಕ ಬಂಡವಾಳವನ್ನು ಕಿರುಸಾಲ ರೂಪದಲ್ಲಿ ನೀಡಲಾಗುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಿ" ಎಂದು ದ.ಕ ಜಿಲ್ಲಾ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ಅವರು ಇಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ದ.ಕ ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ , ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ಹಾಗೂ ಜಿಲ್ಲೆಯ ಎಲ್ಲಾ ರಾಷ್ಟ್ರೀಕೃತ ಖಾಸಗಿ ಮತ್ತು ಸ್ಥಳೀಯ ಬ್ಯಾಂಕ್ಗಳ ಸಂಯುಕ್ತಾಶ್ರಯದಲ್ಲಿ ಆತ್ಮನಿರ್ಭರ್ ಭಾರತ್ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿಯಲ್ಲಿ ಬೀದಿ ಬದಿ ವ್ಯಾಪಾರಿಗಳ ಕಿರು ಸಾಲ ವಿತರಣಾ ಸಮಾರಂಭ ಹಾಗೂ ಇತರೆ ಯೋಜನೆಗಳ ಮಾಹಿತಿ ಕಾರ್ಯಾಗಾರವನ್ನು ಹಾಗೂ ಬ್ಯಾಂಕ್ ಸ್ಟಾಲ್ಗಳನ್ನು ಉದ್ಘಾಟಿಸಿ ಮಾತನಾಡಿದರು.
"ಪ್ರಧಾನಮಂತ್ರಿ ಮೋದಿಯವರು ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಸರಕಾರದ ಸೌಲಭ್ಯಗಳನ್ನು ತಲುಪಿಸಬೇಕೆಂಬ ಉದ್ದೇಶದಿಂದ ಜನ್-ಧನ್ ಯೋಜನೆಯನ್ನು ಜಾರಿಗೆ ತಂದರು ಇದರಿಂದಾಗಿ ದೇಶದಲ್ಲಿ 35 ಸಾವಿರ ಕೋಟಿ ಜನರು ಬ್ಯಾಂಖ್ ಖಾತೆಯನ್ನು ಹೊಂದಿ ಸರಕಾರದ ವಿವಿಧ ಯೋಜನೆಯ ಆರ್ಥಿಕ ಲಾಭವನ್ನು ನೆರವಾಗಿ ಪಡೆದುಕೊಳ್ಳುತ್ತಿದ್ದಾರೆ" ಎಂದರು.
"ಪ್ರಧಾನ ಮಂತ್ರಿಯವರ ಪಿಎಂ ಸ್ವನಿಧಿ ಕಿರುಸಾಲ ಯೋಜನೆಯು ಬೀದಿ ಬದಿ ವ್ಯಾಪಾರಿಗಳಿಗೆ ಕೊರೊನಾದಿಂದ ಸಂಕಷ್ಟಕ್ಕೀಡಾದ ವ್ಯಾಪಾರಿಗಳಿಗೆ ಪುನ: ವ್ಯಾಪಾರ ನಡೆಸಲು ಕಿರು ಸಾಲ ನೀಡಿ ಅವರ ಬದುಕನ್ನು ಕಟ್ಟಿ ಸ್ವಾವಲಂಬಿಗಳಾಗಿ ಜೀವನ ನಡೆಸಿ ಅಭಿವೃದ್ಧಿಯನ್ನು ಸಾಧಿಸಲು ಈ ಯೋಜನೆಯು ಸಹಾಯಕವಾಗಲಿದೆ" ಎಂದರು.
"ಆತ್ಮನಿರ್ಭರ್ ಭಾರತ್ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿಯಲ್ಲಿ ಈಗಾಗಲೇ 4,176 ಜನರು ಕಿರುಸಾಲಕ್ಕಾಗಿ ಅರ್ಜಿಹಾಕಿದ್ದು, 1600 ಜನರಿಗೆ ಸಾಲ ಮಂಜೂರಾಗಿ ವ್ಯಾಪಾರವನ್ನು ಪ್ರಾರಂಭಿಸಿದ್ದಾರೆ. ಇನ್ನುಳಿದ ಬೀದಿ ಬದಿ ವ್ಯಾಪಾರಸ್ಥರು ಇದರ ಪ್ರಯೋಜನವನ್ನು ಪಡೆಯಲು ಇಂದು ಇದರ ಸಮಾವೇಶವನ್ನು ಕೈಗೊಂಡಿದ್ದು, ಇದರ ಸದುಪಯೋಗಪಡಿಸಿಕೊಳ್ಳಬೇಕು. ಈ ಯೋಜನೆಯು ಜಿಲ್ಲೆಯ ಕಟ್ಟಕಡೆಯ ಪ್ರಜೆಗಳಿಗೂ ಇದರ ಪ್ರಯೋಜನ ಪಡೆಯುವಂತಾಗಬೇಕು ಬೀದಿ ಬದಿ ವ್ಯಾಪಾರಿಗಳಲ್ಲಿ ಬೀದಿ ಬದಿಯ ಮಹಿಳಾ ಮೀನುಗಾರರಿಗೆ ಮೀನುಮಾರಾಟಕ್ಕೆ ಸಾಲವನ್ನು ನೀಡಿ ವ್ಯಾಪಾರಿಗಳಿಗೆ ಸ್ವಾವಲಂಬಿ ಜೀವನ ನಡೆಸಲು ಸಾಲ ಸೌಲಭ್ಯ ನೀಡಿ ಸರಕಾರದ ಜೊತೆಯಾಗಿ ಕೆಲಸ ಮಾಡುವ ಸಹಕಾರಿ ಬ್ಯಾಂಕ್ನ ಅಧ್ಯಕ್ಷರಾದ ಎಮ್.ಎನ್ ರಾಜೇಂದ್ರ ಪ್ರಸಾದ್ ಸಹಕರಿಸಿದ್ದಾರೆ" ಎಂದರು.
"ಸಾರ್ವಜನಿಕರು ಮುದ್ರಾ ಯೋಜನೆಯಡಿ ಆರ್ಥಿಕವಾಗಿ ನೆರವು ಪಡೆದು ಸ್ವಂತ ಉದ್ಯೋಗ ಕೈಗೊಳ್ಳಲು ಬಂದಾಗ ಅವರುಗಳಿಗೆ ಆರ್ಥಿಕ ನೆರವನ್ನು ಬ್ಯಾಂಕುಗಳು ಒದಗಿಸಬೇಕು, ಕಿರುಸಾಲ ಯೋಜನೆಯ ಸಾಲ ಪಡಯಲು ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಹೊಂದಿ ಬಂದಾಗ ಅವರಿಗೆ ಸಾಲ ನೀಡಬೇಕು ಎಂದ ಅವರು ಬ್ಯಾಂಕ್ನ ದೈನಂದಿನ ಕಾರ್ಯ ಚಟುವಟಿಕೆಯಲ್ಲಿ ಕನ್ನಡ ಭಾಷೆಯನ್ನು ಬಳಸಬೇಕು" ಎಂದರು.
ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಮಾತನಾಡಿ, "ಕೊರೊನಾದಿಂದಾಗಿ ಜೀವನ ನಡೆಸಲು ಬೀದಿ ಬದಿ ವ್ಯಾಪಾರಿಗಳು ಸುಮಾರು ಸವಾಲುಗಳನ್ನು ಎದುರಿಸಿ ವ್ಯಾಪಾರವನ್ನು ನಡೆಸಲಾಗದೇ ಕುಗ್ಗಿ ಹೋಗಿರುವ ವ್ಯಾಪಾರಿಗಳಿಗೆ ಈ ಯೋಜನೆಯು ಆಶಾದಾಯಕವಾಗಿದೆ" ಎಂದರು.
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಮಾತನಾಡಿ, "ನಳಿನ್ ಕುಮಾರ್ ಜಾತಿ, ಮತ-ಧರ್ಮ, ಪಕ್ಷ ಎಂಬ ರಾಜಕಾರಣವನ್ನು ಬಿಟ್ಟು, ಎಲ್ಲಾ ಫಲಾನುಭವಿಗಳಿಗೆ ಕಿರು ಸಾಲ ಯೋಜನೆಯನ್ನು ತಲುಪುವ ವ್ಯವಸ್ಥೆಯನ್ನು ಮಾಡಿದ್ದಾರೆ" ಎಂದರು.
ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಅತಿಥಿ ಗಣ್ಯರನ್ನು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್, ಜಿಲ್ಲಾ ಪಂಚಾಯತ್ನ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸುಳ್ಯ ವಿಧಾನ ಸಭಾ ಕ್ಷೇತ್ರದ ಅಂಗಾರ ಎಸ್, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಯು, ಪುತ್ತೂರು ಶಾಸಕ ಸಂಜೀವ ಮಠಂದೂರು, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್, ಮಂಗಳೂರು ಮಹಾನಗರ ಪಾಲಿಕೆಯ ಮಹಾ ಪೌರ ದಿವಾಕರ ಹಾಗೂ ಬ್ಯಾಂಕ್ಗಳ ಮಹಾಪ್ರಭಂದಕರುಗಳಾದ ಬಿ.ಯೋಗಿಶ್ ಆಚಾರ್ಯ, ಸುಜಯ ಯು ಶೆಟ್ಟಿ, ಎಂ.ವಿ ಬಾಲಸುಬ್ರಮಣ್ಯಂ, ರಾಜೇಶ್ ಗುಪ್ತ, ಮತ್ತು ಗೋಕುಲ್ದಾಸ್ ಪೈ ಉಪಸ್ಥಿತರಿದ್ದರು.