ಮಂಗಳೂರು, ಡಿ.02 (DaijiworldNews/MB) : ''ತುಳುನಾಡಿನ ಕೋಟಿ ಚೆನ್ನಯರ ಹೆಸರನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರುನಾಮಕರಣ ಮಾಡಬೇಕು ಎಂದು ಒತ್ತಾಯಿಸಿ ಬಿಲ್ಲವ ಬ್ರಿಗೇಡ್ ಮಂಗಳೂರು ಡಿಸೆಂಬರ್ 7 ರಂದು ಕುದ್ರೋಳಿ ದೇವಸ್ಥಾನದಿಂದ ಬಜ್ಪೆ ವಿಮಾನ ನಿಲ್ದಾಣದವರೆಗೆ ಬೈಕ್ ರ್ಯಾಲಿ ನಡೆಸಲಿದೆ'' ಎಂದು ಬಿಲ್ಲವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ಅವಿನಾಶ್ ಸುವರ್ಣ ಮಾಹಿತಿ ನೀಡಿದರು.


ಡಿಸೆಂಬರ್ 1 ರ ಮಂಗಳವಾರ ಇಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಕೋಟಿ ಚೆನ್ನಯ ಸಂಚಲನ ಸಮಿತಿಯ ಮುಖ್ಯ ಸಂಚಾಲಕ ಸತ್ಯಜೀತ್ ಸುರತ್ಕಲ್, ''2019 ರ ಅವಧಿಯಲ್ಲಿ ವಿಮಾನ ನಿಲ್ದಾಣವನ್ನು ಕೋಟಿ ಚೆನ್ನಯ ವಿಮಾನ ನಿಲ್ದಾಣವೆಂದು ಮರುನಾಮಕರಣ ಮಾಡುವ ಪ್ರಸ್ತಾಪವನ್ನು ಜಿಲ್ಲಾ ಪಂಚಾಯತ್ ಸಭೆಯಲ್ಲಿ ಅಂಗೀಕರಿಸಲಾಯಿತು. ನಂತರ ಇದನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಯಿತು. ವಿಮಾನ ನಿಲ್ದಾಣಕ್ಕೆ ಹೆಸರು ಬದಲು ಮಾಡಬೇಕಾದರೆ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯತ್ ಮೂಲಕ ರಾಜ್ಯ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಕೆಯಾಗಬೇಕು. ಬಳಿಕ ರಾಜ್ಯ ಸರ್ಕಾರ ಈ ಪ್ರಸ್ತಾಪವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು. ಇದು ಅನುಸರಿಸಬೇಕಾದ ಪ್ರಕ್ರಿಯೆ'' ಎಂದು ವಿವರಿಸಿದರು.
"ನಾವು ಡಿಸೆಂಬರ್ 7 ರಂದು ಕುದ್ರೋಳಿ ದೇವಸ್ಥಾನದಿಂದ ಬಜ್ಪೆ ವಿಮಾನ ನಿಲ್ದಾಣದವರೆಗೆ ಬೈಕ್ ರ್ಯಾಲಿ ನಡೆಸಲು ನಿರ್ಧರಿಸಿದ್ದೇವೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕೋಟಿ ಚೆನ್ನಯ ವಿಮಾನ ನಿಲ್ದಾಣವೆಂದು ಮರುನಾಮಕರಣ ಮಾಡುವಂತೆ ಒತ್ತಾಯಿಸಿ ನಡೆಯಲಿರುವ ಈ ಬೈಕ್ ರ್ಯಾಲಿಗೆ ಅಲ್ಲಿ ಹಲವಾರು ಸಂಘ ಸಂಸ್ಥೆಗಳು ಬೆಂಬಲ ನೀಡಲಿದೆ'' ಎಂದು ಹೇಳಿದರು.
"ಕೋಟಿ ಚೆನ್ನಯ ಹೆಸರು ಮರುನಾಮಕರಣ ಮಾಡುವಂತೆ ಈಗಾಗಲೇ ಕಾನೂನು ಪ್ರಕ್ರಿಯೆ ನಡೆಸಲಾಗಿದೆ. ಆದರೆ ರಾಜ್ಯ ಸರ್ಕಾರದ ಬಳಿ ಇದರ ಪ್ರಸ್ತಾಪ ಅರ್ಜಿ ಇನ್ನೂ ಬಾಯಿಯಾಗಿದೆ. ವಿಮಾನ ನಿಲ್ದಾಣವನ್ನು ಕೋಟಿ ಚೆನ್ನಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ಮಾಡಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು'' ಎಂದು ಒತ್ತಾಯಿಸಿದರು.
ಈ ಸಮಿತಿಯ ಸೂರಜ್ ಕಲ್ಯಾ, ಜೀವನ್ ಪೂಜಾರಿ, ಪ್ರಕಾಶ್ ಸನಿಲ್, ಅಶ್ವತ್ ಉಪ್ಪಳ ಉಪಸ್ಥಿತರಿದ್ದರು.