ಮಂಗಳೂರು, ಡಿ.02 (DaijiworldNews/MB) : ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಪರ್ಸಿನ್ ಬೃಹತ್ ಬೋಟೊಂದು ಸಮುದ್ರದಲ್ಲಿ 15 ನಾಟಿಕಲ್ ಮೈಲು ದೂರದಲ್ಲಿ ಮುಳುಗಡೆಗೊಂಡ ಪ್ರಕರಣಕ್ಕೆ ಸಂಬಂಧಿಸಿ ಮೃತರ ಕುಟುಂಬಕ್ಕೆ 6 ಲಕ್ಷ ಪರಿಹಾರ ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಕೋಟಾ ಶ್ರೀನಿವಾಸ ಪೂಜಾರಿಯವರು, ''ಮಂಗಳೂರಿನ ಪಡುಕಡಲಿನಲ್ಲಿ ಮೀನುಗಾರಿಕೆ ದೋಣಿ ದುರಂತದಲ್ಲಿ ಮೃತರಾದ ಕುಟುಂಬಗಳಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ನಿರ್ದೇಶನದ ಮೇರೆಗೆ ತಲಾ 6 ಲಕ್ಷ ರೂ. ಬಿಡುಗಡೆಗೊಳಿಸಲಾಗಿದೆ. ಸಂತ್ರಸ್ತರ ಕುಟುಂಬಗಳಿಗೆ ಸರ್ಕಾರದ ಪರವಾಗಿ ಸಾಂತ್ವಾನ ಹೇಳುತ್ತಾ ನೊಂದ ಕುಟುಂಬಗಳ ಪರವಾಗಿ, ಮತ್ತಷ್ಟು ನೆರವಿಗಾಗಿ ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ'' ಎಂದು ತಿಳಿಸಿದ್ದಾರೆ.
ಇನ್ನು ಮೃತ ಮೀನುಗಾರರ ಮೃತ ದೇಹವಿರಿಸಿರುವ ವೆನ್ಲಾಕ್ ಆಸ್ಪತ್ರೆ ಶವಗಾರಕ್ಕೆ ಭೇಟಿ ನೀಡಿದ ಸಂದರ್ಭ ಮಾತನಾಡಿದ ಅವರು, ''ದುರಂತ ಹೇಗಾಯಿತು ಅನ್ನೋವುದರ ಬಗ್ಗೆ ತನಿಖೆಯಾಗುತ್ತಿದೆ. ಶೀಘ್ರವೇ ಉಳಿದವರ ಮೃತದೇಹವನ್ನೂ ಪತ್ತೆಹಚ್ಚಲಾಗುವುದು. ಬಲೆಯೊಳಗೆ ಮೃತದೇಹ ಸಿಲುಕಿಹಾಕಿಕೊಂಡಿದ್ದರಿಂದ ವಿಳಂಬವಾಗುತ್ತಿದೆ'' ಎಂದು ತಿಳಿಸಿದ್ದಾರೆ.