ಜೋಧ್ಪುರ, ಜೂ.10: ಮುಸ್ಲಿಂರ ಪವಿತ್ರ ರಂಜಾನ್ ಮಾಸದಲ್ಲಿ ದೇವರನ್ನು ಒಲಿಸಲು ತನ್ನ ಪುತ್ರಿಯನ್ನೇ ಬಲಿಕೊಟ್ಟ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನವಾಬ್ ಅಲಿ ಎಂಬಾತ ಬಂಧಿತ ಆರೋಪಿ. ಈತನ ಹಿರಿಯ ಪುತ್ರಿ ರಿಝ್ವಾನಾ(4) ಕೊಲೆಯಾದ ಬಾಲಕಿ.
ರಿಝ್ವಾನಾಳ ಮೃತದೇಹ ಅವರ ಮನೆಯಲ್ಲಿ ಮುಂಜಾನೆ ಪತ್ತೆಯಾಗಿದ್ದು, ಕತ್ತು ಸೀಳಿ ಕೊಲೆ ಮಾಡಲಾಗಿತ್ತು ಎಂದು ಜೋಧ್ಪುರ ಪೊಲೀಸ್ ಅಧೀಕ್ಷಕ ರಾಜನ್ ದುಷ್ಯಂತ್ ವಿವರಿಸಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಬಂದ ಪೊಲೀಸರು ತನಿಖೆ ನಡೆಸಲು ಶ್ವಾನ ದಳ ಹಾಗೂ ಎಫ್ಎಸ್ಎಲ್ ತಂಡವನ್ನು ಕರೆಸಲಾಗಿತ್ತು,. ಆದರೆ ಘಟನೆ ನಡೆದ ಬಳಿಕ ಮನೆಯೊಳಗಡೆಯೇ ಚಿಲಕ ಹಾಕಿ ಕುಳಿತ ಬಗ್ಗೆ ಪೊಲೀಸರು ಶಂಕೆಯಿಂದ ಮನೆಯವರನ್ನೇ ತೀವ್ರವಾಗಿ ವಿಚಾರಿಸಿದಾಗ ಬಾಲಕಿಯ ತಂದೆ ದೇವರನ್ನು ಒಲಿಸಿಕೊಳ್ಳಲು ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಎಂದಿನಂತೆ ಗುರುವಾರ ರಾತ್ರಿ ನವಾಬ್ ಅಲಿ ,ಆತನ ಮಡದಿ ಹಾಗೂ ಇಬ್ಬರು ಹೆಣ್ಣುಮಕ್ಕಳು ಜತೆಗೆ ಛಾವಣಿಯಲ್ಲಿ ಮಲಗಿದ್ದರು. ಆದರೆ ಬಾಲಕಿ ರಿಝ್ವಾನಾ ಮರುದಿನ ನಾಪತ್ತೆಯಾಗಿರುವುದು ಕಂಡುಬಂದಿತ್ತು. ಶೋಧ ನಡೆಸಿದಾಗ ಮನೆಯ ಕೆಳಅಂತಸ್ತಿನಲ್ಲಿ ಆಕೆಯ ಮೃತದೇಹ ಪತ್ತೆಯಾಗಿತ್ತು. ಮಗಳನ್ನು ಬೆಕ್ಕು ಕೊಂದಿರಬೇಕು ಎಂದು ಅಲಿ ತನ್ನ ಕುಟುಂಬವನ್ನು ನಂಬಿಸಲು ಯತ್ನಿಸಿದ್ದ. ಮಗಳನ್ನು ಕೊಲೆ ಮಾಡುವ ಮುಂಚೆ ಆಕೆಯನ್ನು
ತನ್ನ ಜತೆ ಮಾರುಕಟ್ಟೆಗೆ ಕರೆದೊಯ್ದು ಆಕೆಯ ಇಷ್ಟದ ಸಿಹಿತಿಂಡಿಗಳನ್ನು ಕೊಡಿಸಿದ್ದ. ಬಳಿಕ ನಡುರಾತ್ರಿ ಕೆಳ ಅಂತಸ್ತಿಗೆ ಕರೆ ತಂದು ತೊಡೆಯಲ್ಲಿ ಕೂರಿಸಿಕೊಂಡು, ಹರಿತವಾದ ಚಾಕುವಿನಿಂದ ಆಕೆಯ ಕತ್ತು ಕೊಯ್ದು ಆಕೆಯ ಕೊಲೆ ಮಾಡಿ ಬಂದು ಎಲ್ಲರ ಜತೆಗೆ ಮಲಗಿದ್ದ ಎನ್ನುವುದು ಪೊಲೀಸ್ ವಿಚಾರಣೆಯಿಂದ ತಿಳಿದುಬಂದಿದೆ.