ಉಡುಪಿ, ಡಿ.02 (DaijiworldNews/PY): ರಾಜ್ಯದ ವಿಶೇಷ ಶಾಲಾ ಶಿಕ್ಷಕರ ಗೌರವ ಧನವನ್ನು ಹೆಚ್ಚು ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರರ ಸಂಘದ ವತಿಯಿಂದ ರಾಜ್ಯಾದ್ಯಂತ ಕರೆ ನೀಡಿದ್ದ ಸಾಂಕೇತಿಕ ಮುಷ್ಕರದ ಅಂಗವಾಗಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಬಳಿ ವಿಶೇಷ ಶಾಲಾ ಶಿಕ್ಷಕರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.












ಪ್ರತಿಭಟನೆಯನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರರ ಸಂಘದ ಅಧ್ಯಕ್ಷ್ಯರಾದ ಡಾಕ್ಟರ್ ಕಾಂತಿ ಹರೀಶ್, "ವಿಶೇಷ ಮಕ್ಕಳನ್ನು ನಾವು ದೇವರ ಮಕ್ಕಳು ಎಂಬಂತಹ ರೀತಿಯಲ್ಲಿ ಅವರನ್ನು ಬೆಳೆಸುತ್ತಿದ್ದೇವೆ. ಅವರ ಬಾಳಿಗೆ ಬೆಳಕು ನೀಡುವ ದೃಷ್ಟಿಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಆದರೆ, ನಮ್ಮ ಬಾಳಿನಲ್ಲೆ ಈಗ ಕತ್ತಲು ಆವರಿಸಿದೆ. ಹಲವಾರು ಬಾರಿ ಸರಕಾರಕ್ಕೆ ನಾವು ಮನವಿಗಳನ್ನು ಸಲ್ಲಿಸಿದ್ದೇವೆ. ಆದರೆ, ಯಾವುದೇ ಪ್ರಯೋಜನ ಆಗಿಲ್ಲ. ಈಗಿನ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆಯವರು ಕೂಡಾ ಓರ್ವ ವಿಕಲ ಚೇತನ ಮಗುವಿನ ತಾಯಿಯಾಗಿದ್ದಾರೆ. ಆದರೂ, ಕೂಡಾ ನಮ್ಮ ಸಮಸ್ಯೆಗಳಿಗೆ ಇನ್ನೂ ಪರಿಹಾರ ದೊರಕಿಲ್ಲ. ಕಳೆದ 6 ವರ್ಷಗಳಿಂದ ನಾವು ನಿರಂತರ ಹೋರಾಟ ಮಾಡುತಿದ್ದೇವೆ. ಡಿಸೆಂಬರ್ 3 ರಂದು ನಡೆಯುವ ವಿಕಲ ಚೇತರನ ದಿನಾಚರಣೆಯಲ್ಲಿ ಕೂಡಾ ನಾವು ಭಾಗವಹಿಸುವುದಿಲ್ಲ. ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಕನಿಷ್ಟ ವೇತನವನ್ನು ಆದರೂ ನಮಗೆ ನೀಡಬೇಕು" ಎಂದು ಆಗ್ರಹಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಆಶಾ ನಿಲಯ ಶ್ರೇಯೋಭಿವೃದ್ದಿ ಸಮಿತಿಯ ಅದ್ಯಕ್ಷ್ಯರಾದ ಜಯಕರ್ ಶೆಟ್ಟಿ ಇಂದ್ರಾಳಿ, "ನಾನು ವಿಶೇಷ ಶಾಲಾ ಶಿಕ್ಷಕರ ಸಮಸ್ಯೆಗಳನ್ನು ಹತ್ತಿರದಿಂದ ಕಂಡವನು. ಈ ಹಿಂದಿನ ಪ್ರತಿಭಟನೆಗಳಲ್ಲಿ ಕೂಡಾ ನಾನು ಭಾಗವಹಿಸಿದ್ದೆ. ಈ ಶಿಕ್ಷಕರು ಬಹಳ ಶ್ರಮಪಟ್ಟು ದುಡಿಯುತಿದ್ದಾರೆ ಇವರಲ್ಲಿ ಹೆಚ್ಚಿನವರು ಮಹಿಳೆಯರು. ಉಡುಪಿ ಜಿಲ್ಲೆಯಲ್ಲಿ ಸುಮಾರು 16 ಇಂತಹ ವಿಶೇಷ ಶಾಲೆಗಳು ಇವೆ ಇಲ್ಲಿ ಸುಮಾರು 600ಕ್ಕೂ ಅಧಿಕ ಮಂದಿ ದುಡಿಯುತಿದ್ದಾರೆ. ಸಾಮಾನ್ಯ ಶಿಕ್ಷಕರಿಗೆ ಸೇವಾ ಭದ್ರತೆ, ಹಾಗೂ ಇನ್ನಿತರ ಸೌಲಭ್ಯಗಳು ಸರಕಾರದಿಂದ ದೊರೆಯುತ್ತಿವೆ. ಆದರೆ, ವಿಶೇಷ ಶಾಲಾ ಶಿಕ್ಷಕರಿಗೆ ಇದ್ಯಾವುದೂ ಇಲ್ಲ. 1982 ರಲ್ಲಿ ಸುಮಾರು 36 ಶಾಲೆಗಳಿಗೆ ಸರಕಾರದ ಗ್ರಾಂಟ್ ಲಭಿಸಿತ್ತು. ಆದರೆ, ಅದರ ನಂತರ ಸ್ಥಾಪನೆಯಾದ ಯಾವ ಶಾಲೆಗೂ ಗ್ರಾಂಟ್ ಲಬಿಸಿಲ್ಲ. ಕಾರ್ಮಿಕರಿಗೆ ಕನಿಷ್ಟ ವೇತನವೆಂಬ ಮಾನದಂಡ ಇದೆ. ಇದನ್ನು ಪಾಲಿಸದಿದ್ದಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. ಆದರೆ, ಅದಕ್ಕಿಂತ ಹೆಚ್ಚು ಕೆಲಸ ಮಾಡುವ ಶಿಕ್ಷಕರಿಗೆ ಯಾವ ಭದ್ರತೆಯೂ ಇಲ್ಲವಾಗಿದೆ. ಕಳೆದ ಬಾರಿ ಯಡಿಯೂರಪ್ಪ ನವರು ಮುಖ್ಯಮಂತ್ರಿ ಆಗಿದ್ದ ಸಂಧರ್ಭದಲ್ಲಿ 6,500 ರೂ. ಗೌರವಧನವನ್ನು ನೀಡುವ ವ್ಯವಸ್ಥೆ ಮಾಡಿದ್ದರು. ತದನಂತರ ಸಿದ್ದರಾಮಯ್ಯ ಸರಕಾರ ಇದನ್ನು 13,500 ರೂ.ಗೆ ಏರಿಕೆ ಮಾಡಿತು. ಆದರೆ, ಅದರ ನಂತರದ ದಿನಗಳಲ್ಲಿ ಇದು ಏರಿಕೆ ಆಗಿಲ್ಲ. ಸರಕಾರ ತಕ್ಷಣ ಇತ್ತ ಸ್ಪಂದಿಸಿ ವಿಶೇಷ ಶಾಲಾ ಶಿಕ್ಷಕರ ಬೇಡಿಕೆಗೆ ಸ್ಪಂದಿಸಬೇಕು" ಎಂದರು.
ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿದ ಕರ್ನಾಟಕ ಕಾರ್ಮಿಕ ವೇದಿಕೆಯ ಅಧ್ಯಕ್ಷ್ಯರಾದ ಡಾಕ್ಟರ್ ರವಿ ಶೆಟ್ಟಿ ಬೈಂದೂರು, "ನಾವು ಪ್ರಜಾ ಪ್ರಭುತ್ವ ದೇಶದಲ್ಲಿ ಇದ್ದೇವೆ. ನಮ್ಮ ಹಕ್ಕುಗಳಿಗಾಗಿ ನಾವು ಹೋರಾಡಲೇಬೇಕು. ಸರಕಾರಗಳು ಈಗ ಕೋಟಿ ಕೋಟಿ ಹಗರಣಗಳನ್ನು ಮಾಡಿ ಅದರ ತನಿಖೆಗಾಗಿ ಮತ್ತಷ್ಟು ಕೋಟಿ ತೆರಿಗೆ ಹಣವನ್ನು ಪೋಲು ಮಾಡುತ್ತಾರೆ. ನಮ್ಮ ಸಂಘಟನೆ ಕೂಡಾ ಬೆಂಗಳೂರಿನಲ್ಲಿ 118 ದಿನಗಳ ಕಾಲ ಹೋರಾಟ ಮಾಡಿದೆ. ನೀವು 5,000 ಮಂದಿ ಶಿಕ್ಷಕರುಗಳು ತಯಾರಿದ್ದಲ್ಲಿ ಮುಂದಿನ ದಿನಗಳಲ್ಲಿ ನಾವು ಬೆಂಗಳೂರಿನಲ್ಲಿ ಪ್ರತಿಭಟನೆಯನ್ನು ನಡೆಸಿ. ಅದಕ್ಕೆ ನಮ್ಮ ಸಂಪೂರ್ಣ ಬೆಂಬಲ ನೀಡುತ್ತೇವೆ. ಬೇಕಾದಲ್ಲಿ ಮುಖ್ಯಮಂತ್ರಿ, ಸಚಿವರ ಮನೆಗೆ ಮುತ್ತಿಗೆ ಹಾಕುವುದಕ್ಕು ನಾವು ತಯಾರಿರುತ್ತೇವೆ" ಎಂದರು.
ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರು ಗೌರವಧನವನ್ನು ಹೆಚ್ಚಿಸುವಂತೆ ಕೋರಿ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರರ ಸಂಘದ ಗೌರವಾದ್ಯಕ್ಷ್ಯ ಆಗ್ನೇಸ್ ಕುಂದರ್, ಕಾರ್ಯದರ್ಶಿ ಜಯವಿಜಯ ಕುಮಾರಿ, ಕೋಶಾಧಿಕಾರಿ ಪ್ರಮೀಳಾ, ಆಸರೆ ವಿಶೇಷ ಶಾಲೆಯ ಜಯವಿಠಲ್, ಸಾಧನಾ ಕಿಣಿ, ಮಾನಸ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷ್ಯ ಹೆನ್ರಿ ಡಿಸೋಜಾ ಕೋಶಾಧಿಕಾರಿ ಸೈಮನ್ ಡಿಸೋಜಾ, ಕಾರುಣ್ಯ ಸಂಸ್ಥೆಯ ಟ್ರಸ್ಟಿಗಳಾದ ಪ್ರಭಾಕರ ಅಮ್ಮನ್ನ, ದೇವಪುತ್ರ ಕುಮಾರ್, ಆಶಾ ನಿಲಯ ಶ್ರೇಯೋಭಿವೃದ್ದಿ ಸಮಿತಿಯ ಕಾರ್ಯದರ್ಶಿ ಸ್ಟೀಫನ್ ಕರ್ಕಡ, 16 ವಿಶೇಷ ಶಾಲಾ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ಪೋಷಕರು ಪ್ರತಿಭಟನೆಯಲ್ಲಿ ಭಾಗವಹಿಸಿದರು.