ಮಂಗಳೂರು, ಡಿ.02 (DaijiworldNews/PY): "ಬಲಿಷ್ಠ ಕನಸು- ಆಕಾಂಕ್ಷೆಗಳಿಂದ ಕೂಡಿದ ಪರಿಶ್ರಮಗಳ ಮೂಲಕ ಶ್ರೇಷ್ಠ ಉದ್ಯಮಿಗಳಾಗಲು ಸಾಧ್ಯ. ಸ್ವ ಉದ್ಯೋಗದ ಮೂಲಕವೇ ಆರ್ಥಿಕ ಸ್ವಾವಲಂಭಿಗಳಾಗಬಹುದು" ಎಂದು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.

"ಸಂಕಲ್ಪ ಯೋಜನೆ ಆಯ್ದ ಜಿಲ್ಲೆಗಳಿದ್ದು ದಕ್ಷಿಣ ಕನ್ನಡದ ಸ್ವ ಉದ್ಯೋಗಾಕಾಂಕ್ಷಿಗಳು ತರಬೇತಿಯ ಸಂಪೂರ್ಣ ಸದುಪಯೋಗ ಪಡೆದು ಕ್ರಿಯಾಶೀಲ ಹಾಗೂ ಮಾದರಿ ಉದ್ಯಮಿಗಳಾಗಿ ಮೂಡಿ ಬರಬೇಕು" ಎಂದು ಕರೆ ನೀಡಿದರು.
ಕರ್ನಾಟಕ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಬೆಂಗಳೂರು, ಸಿಡಾಕ್ ಧಾರವಾಡ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಮಂಗಳೂರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್, ಹಾಗೂ ಸರಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ ಕದ್ರಿ ಇವರ ಸಂಯುಕ್ತ ಆಶ್ರಯದಲ್ಲಿ ಸಂಕಲ್ಪ ಯೋಜನೆಯಡಿಯಲ್ಲಿ ಜರಗಿದ 6 ದಿನಗಳ ಇನ್ಕ್ಯುಬೇಶನ್ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ನೆರವೇರಿಸಿದರು.
ಅಧ್ಯಕ್ಷತೆಯನ್ನು ವಹಿಸಿದ ಇಲಾಖೆಯ ಜಂಟಿ ನಿರ್ದೇಶಕ ಅರವಿಂದ ಡಿ ಬಾಳೇರಿ ಮಾತನಾಡಿ, "ಸಂಕಲ್ಪ ಯೋಜನೆಯ ಧ್ಯೇಯೋದೇಶಗಳನ್ನು ವಿವರಿಸಿ ಉದ್ದಿಮೆ ಪ್ರಾರಂಭ ಮಾಡುವವರಿಗೆ ರಾಷ್ಟ್ರೀಕೃತ ಬ್ಯಾಂಕ್ಗಳ ಮೂಲಕ ಧನಸಹಾಯ ಹಾಗೂ ಸಹಾಯಧನ ಪಡೆಯುವವರಿಗೆ ಇಲಾಖೆ ಸಂಪೂರ್ಣ ಸಹಕರಿಸಲಿದೆ" ಎಂದು ತಿಳಿಸಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿ ಸೋಜ, ಪ್ರಾಂಶುಪಾಲ ಬಾಲಕೃಷ್ಣ ಎ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಉಡುಪಿ ಜಿಲ್ಲಾ ಉದ್ಯಮಿಗಳ ಸಂಘದ ಅಧ್ಯಕ್ಷ ಉಮಾನಾಥ್ ಉಪಸ್ಥಿತರಿದ್ದರು.