ಬಂಟ್ವಾಳ, ಡಿ. 02 (DaijiworldNews/SM): ಸರ್ವೇ ನಂಬರ್ ಬದಲಿಸಿ ಸರ್ವೇಯರ್ ನಡೆಸಿದ ಎಡವಟ್ಟಿನಿಂದಾಗಿ ವ್ಯಕ್ತಿಯೊಬ್ಬರಿಗೆ ಸೇರಿದ ಜಮೀನಿನ ಆವರಣ ಬೇಲಿ ನೆಲಸಮವಾದ ಘಟನೆ ತಾಲೂಕಿನ ಬರಿಮಾರು ಗ್ರಾಮದಲ್ಲಿ ಬುಧವಾರ ನಡೆದಿದೆ.

ಸರ್ವೇಯರ್ ಮಂಜೇಗೌಡ ನಡೆಸಿದ ಅವಾಂತರದಿಂದ ಬರಿಮಾರು ಗ್ರಾಮದ ಬಲ್ಯ ನಿವಾಸಿಯಾಗಿರುವ ಎವರೆಸ್ಟ್ ಪಿಂಟೊ ನಷ್ಟ ಅನುಭವಿಸಿದವರಾಗಿದ್ದಾರೆ. ಇದೀಗ ಪರಿಹಾರ ಹಾಗೂ ನ್ಯಾಯಕ್ಕಾಗಿ ಜಿಲ್ಲಾಧಿಕಾರಿ ಹಾಗೂ ಎಸ್ಪಿಯವರ ಮೊರೆಹೋಗಿದ್ದಾರೆ. ಸರ್ವೇಯರ್ ಮಂಜೇಗೌಡ ಅರ್ಜಿದಾರ ವಾಲ್ಟರ್ ಮಸ್ಕರೇನಸ್ ಪರವಾಗಿ ನ.27 ರಂದು ಎವರೆಸ್ಟ್ ಪಿಂಟೊ ಎಂಬವರಿಗೆ ನೋಟಿಸ್ ಜಾರಿಮಾಡಿದ್ದು, ಇವರ ಸ್ವಾಧೀನದ ಜಮೀನಿನ ಸರ್ವೇ ನಂಬರ್ ಅನ್ನು ಉಲ್ಲೇಖಿಸದೇ ಪಕ್ಕದ ಜಮೀನಿನ ಸರ್ವೇನಂಬರ್(130/4P2) ಉಲ್ಲೇಖಿಸಲಾಗಿತ್ತು.
ಡಿಸೆಂಬರ್ 1ರಂದು ಸ್ಥಳ ಪರಿಶೀಲನೆಗೆ ಬಂದ ಸರ್ವೇಯರ್ ಸರಿಯಾಗಿ ಸರ್ವೆ ನಡೆಸದೆ ಬಂದು ವಾಪಾಸ್ ಹೋಗಿದ್ದರು. ಆದರೆ ಬುಧವಾರ ಬೆಳಿಗ್ಗೆ 9 ಗಂಟೆಗೆ ಅರ್ಜಿದಾರ ವಾಲ್ಟರ್ ಮಸ್ಕರೇನಸ್ ಮತ್ತು ರೊಬಿನ್ ಡಿಸೋಜರವರು ರೊಬಿ ಅರ್ಥ್ ಮೂವರ್ಸ್ ಎಂಬ ಸಂಸ್ಥೆಗೆ ಸೇರಿದ ಜೆಸಿಬಿ ಹಿಟಾಚಿಯನ್ನು ತೆಗೆದುಕೊಂಡು ನನ್ನ ಜಾಗಕ್ಕೆ ಅಕ್ರಮ ಪ್ರವೇಶ ನಡೆಸಿದ್ದಲ್ಲ ನನ್ನ ಜಾಗದ ಆವರಣ ಬೇಲಿಯನ್ನು ಸಂಪೂರ್ಣವಾಗಿ ನಾಶ ಪಡಿಸಿದ್ದಾರೆ ಎಂದು ಎವರೆಸ್ಟ್ ಪಿಂಟೊ ದೂರಿನಲ್ಲಿ ತಿಳಿಸಿದ್ದಾರೆ.
ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ತನ್ನ ದೂರನ್ನು ಸ್ವೀಕರಿಸದೇ ಘಟನೆಗೆ ಪರೋಕ್ಷ ಬೆಂಬಲ ನೀಡಿದ್ದಾರೆ ಎಂದು ಎವರೆಸ್ಟ್ ಪಿಂಟೊ ಆರೋಪಿಸಿದ್ದಾರೆ. ಘಟನೆಯಿಂದಾಗಿ ತನ್ನ ಸ್ವಾಧೀನದಲ್ಲಿರುವ ಸರ್ವೇ ನಂಬರ್ 130/4P3 ವಿಸ್ತೀರ್ಣ 1-14 ಎಕ್ರೆ ಜಮೀನಿನ ಆವರಣ ಬೇಲಿ ನಾಶವಾಗಿ, ಒಂದು ಲಕ್ಷ ರೂಪಾಯಿ ನಷ್ಟವುಂಟಾಗಿದೆ. ಈ ಅವಾಂತರಕ್ಕೆ ಕಾರಣರಾದ ಸರ್ವೇಯರ್ ಮಂಜೇಗೌಡ ಎಲ್. ಪಿ. ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ, ತನಗೆ ನ್ಯಾಯ ಒದಗಿಸುವಂತೆ ಅವರು ರಾಜ್ಯಪಾಲರಿಗೂ ಮನವಿಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.