ಉಡುಪಿ, ಡಿ. 02 (DaijiworldNews/SM): ಕೋವಿಡ್-19 ಸೋಂಕು ಪ್ರಸ್ತುತ ನಿಯಂತ್ರಣದ ಹಾದಿಯಲ್ಲಿದೆ. ಆದರೆ, ಪ್ರಸ್ತುತ ಕೋವಿಡ್ ನಿಯಮಗಳನ್ನು ಉಲ್ಲಂಘಿಸುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸುವವರನ್ನು ಪತ್ತೆ ಹಚ್ಚಿ ದಂಡ ವಿಧಿಸಲು ಅಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.

ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೇ, ನಿಯಮಗಳನ್ನು ಪಾಲನೆ ಮಾಡದೇ ಇರುವ ಬಗ್ಗೆ ಸರ್ಕಾರದ ಅಧಿಸೂಚನೆಯಲ್ಲಿ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ರೂ.200 ಮತ್ತು ಇತರೆ ಕಡೆಗಳಲ್ಲಿ ರೂ 100 ರೂಪಾಯಿ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹಾಗೂ ಮೇಲ್ಪಟ್ಟ ಪೊಲೀಸ್ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಅಭಿವೃಧ್ದಿ ಅಧಿಕಾರಿಗಳು, ನಗರಸಭೆ ಪೌರಾಯುಕ್ತರು, ನಗರಸಭೆ ಆರೋಗ್ಯ ನಿರೀಕ್ಷಕರು, ಕುಂದಾಪುರ ಉಪವಿಭಾಗಾಧಿಕಾರಿ, ಎಲ್ಲಾ ತಾಲೂಕಿನ ತಹಶೀಲ್ದಾರರು, ಪುರಸಭೆ ಮುಖ್ಯಾಧಿಕಾರಿಗಳು ಮತ್ತು ಪಟ್ಟಣ ಪಂಚಾಯತ್ ಹಾಗೂ ಅವರ ಆರೋಗ್ಯ ನಿರೀಕ್ಷಕರು ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮತ್ತು ಎಲ್ಲಾ ಹೋಬಳಿಯ ರಾಜಸ್ವ ನಿರೀಕ್ಷಕರಿಗೆ, ಸಹಾಯಕ ಪೊಲೀಸ್ ಉಪನಿರೀಕ್ಷಕರು ಮತ್ತು ಅಬಕಾರಿ ಉಪ ನಿರೀಕ್ಷಕರು ಹಾಗೂ ಮೇಲ್ಪಟ್ಟ ಅಬಕಾರಿ ಆಧಿಕಾರಿಗೆ ಅಧಿಕಾರವನ್ನು ಪ್ರತ್ಯಾಯೋಜಿಸಿ ನೀಡಲಾಗಿದೆ.
ಪ್ರಸ್ತುತ ಸಾರ್ವಜನಿಕರು ಕೋವಿಡ್-19 ನಿಯಂತ್ರಣ ಸಂಬಂಧ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವ ವಿಷಯದಲ್ಲಿ ತೀರಾ ಅಸಡ್ಡೆ ವಹಿಸುತ್ತಿರುವುದನ್ನು ಗಮನಿಸಲಾಗಿದ್ದು, ಇದ್ದರಿಂದಾಗಿ ಕೋವಿಡ್-19 ಮತ್ತೊಮ್ಮೆ ಹೆಚ್ಚಾಗುವ ಸಂಭವವಿದೆ. ಇಂತಹ ಪ್ರವೃತ್ತಿಗೆ ಕಡಿವಾಣ ಹಾಕುವುದು ಅವಶ್ಯಕವಾಗಿರುವ ಹಿನ್ನಲೆಯಲ್ಲಿ ಹೆಚ್ಚುವರಿಯಾಗಿ ಅಧಿಕಾರಿಗಳಿಗೆ ಅಧಿಕಾರ ನೀಡಿ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.