ಮಂಗಳೂರು, ಡಿ. 02 (DaijiworldNews/SM): ಬಂಟ್ವಾಳ ಮತ್ತು ಮಂಗಳೂರಿನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ತೀವ್ರವಾಗುತ್ತಿವೆ ಎಂದು ಸ್ಟೋನ್ ಬೌಲ್ಡರ್ಸ್ ಸರಬರಾಜುದಾರರ ಸಂಘ ಆರೋಪಿಸಿದೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸ್ಟೋನ್ ಬೌಲ್ಡರ್ಸ್ ಸರಬರಾಜುದಾರರ ಸಂಘದ ಜಂಟಿ ಕಾರ್ಯದರ್ಶಿ ಹೇಮಂತ್ ಕುಮಾರ್, “ಆಡಳಿತ ಮತ್ತು ಸ್ಥಳೀಯ ಅಧಿಕಾರಿಗಳ ಅಧಿಕೃತ ನಿರಾಸಕ್ತಿಯಿಂದಾಗಿ, ಮುಡಿಪು, ಮೆಲ್ಕಾರ್, ನರಹರಿ ಪರ್ವತ, ಬಂಟ್ವಾಳ ಮತ್ತು ಮಂಗಳೂರು ತಾಲೂಕುಗಳಲ್ಲಿ ಅಕ್ರಮ ಕಪ್ಪು ಕಲ್ಲು ಗಣಿಗಾರಿಕೆ ವಿಚಾರವನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ, ಅಕ್ರಮ ಗಣಿಗಾರಿಕೆ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದರು.
"ಅಕ್ರಮವಾಗಿ ಗಣಿಗಾರಿಕೆ ಮಾಡಿದ ಕಲ್ಲುಗಳನ್ನು ಕೇರಳಕ್ಕೆ ಸಾಗಿಸಲಾಗುತ್ತದೆ. ಕಲ್ಲುಗಳಿಗೆ ಉತ್ತಮ ಬೇಡಿಕೆ ಇರುವುದರಿಂದ ಮತ್ತು ಅಲ್ಲಿ ಗಣಿಗಾರಿಕೆಗೆ ಅವಕಾಶವಿಲ್ಲದ ಕಾರಣ, ಕೇರಳದ ಬಂಡವಾಳಶಾಹಿಗಳು ಈ ಅಕ್ರಮ ಕೃತ್ಯದ ಹಿಂದೆ ಇದ್ದಾರೆ" ಎಂದು ಅವರು ಆರೋಪಿಸಿದರು.
ಅಕ್ರಮ ಸಾಗಣೆದಾರರು ಸರ್ಕಾರಕ್ಕೆ ರಾಜಧನವನ್ನು ಪಾವತಿಸದ ಕಾರಣ, ಇದು ನೇರವಾಗಿ ಸರ್ಕಾರದ ಖಜಾನೆಯ ಮೇಲೆ ಪರಿಣಾಮ ಬೀರುತ್ತದೆ. ಇದಲ್ಲದೆ, ಸುತ್ತಮುತ್ತಲಿನ ಜನರು ಆರೋಗ್ಯ ಸಮಸ್ಯೆಗಳು ಮತ್ತು ಪರಿಸರ ಮಾಲಿನ್ಯದಿಂದ ಬಳಲುತ್ತಿದ್ದಾರೆ ಎಂದು ಅವರು ಹೇಳಿದರು. ಸಂಬಂಧಿಸಿದ ಇಲಾಖೆ ಅಕ್ರಮಕ್ಕೆ ಅಂಕುಶ ಹಾಕಬೇಕೆಂದು ಅವರು ಆಗ್ರಹಿಸಿದ್ದಾರೆ.