ಮಂಗಳೂರು, ಡಿ.03 (DaijiworldNews/HR): ಸೆಂಟ್ರಲ್ ರೈಲ್ವೇ ಸ್ಟೇಷನ್ಗೆ ಬ್ರಹ್ಮಶ್ರೀ ನಾರಾಯಣ ಗುರು ದೇವ ಸ್ಟೇಷನ್ ಎಂದು ನಾಮಕರಣ ಮಾಡಬೇಕು. ಈ ಕುರಿತು ನಿರ್ಣಯ ಕೈಗೊಂಡು ಸರಕಾರಕ್ಕೆ ಕಳುಹಿಸಬೇಕು ಎಂದು ವಿಪಕ್ಷ ನಾಯಕ ಅಬ್ದುಲ್ ರವೂಫ್ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮನವಿ ಮಾಡಿದ ಸಂಧರ್ಭದಲ್ಲಿ ನಗರದ ರಸ್ತೆಯೊಂದಕ್ಕೆ ನಾರಾಯಣಗುರು ಹೆಸರಿಡಲು ವಿಪಕ್ಷ ಸದಸ್ಯರು ಆಕ್ಷೇಪಿಸಿದ್ದಾರೆಂಬ ಆರೋಪವನ್ನು ಸದಸ್ಯ ಸುಧೀರ್ ಶೆಟ್ಟಿ ಮಾಡಿದ ವೇಳೆ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.

ವಿಪಕ್ಷ ನಾಯಕರ ಮನವಿಯನ್ನು ಬೆಂಬಲಿಸಿದ ಸುಧೀರ್ ಶೆಟ್ಟಿ, ಸಮಾಜ ಸುಧಾರಕರಾದ ನಾರಾಯಣ ಗುರುಗಳ ಹೆಸರನ್ನು ಅವಶ್ಯವಾಗಿ ಇಡಬೇಕು. ಇದರಲ್ಲಿ ಎರಡು ಮಾತಿಲ್ಲ. ಆದರೆ ಸ್ಥಾಯಿ ಸಮಿತಿ ಸಭೆಯಲ್ಲಿ ಲೇಡಿಹಿಲ್ ವೃತ್ತಕ್ಕೆ ನಾರಾಯಣ ಗುರುಗಳ ಹೆಸರು ಇಡುವ ಪ್ರಸ್ತಾಪಕ್ಕೆ ವಿಪಕ್ಷದ ಸದಸ್ಯರೊಬ್ಬರು ವಿರೋಧಿಸಿ ಆಕ್ಷೇಪಣಾ ಪತ್ರ ಪತ್ರವನ್ನೂ ನೀಡಿದ್ದಾರೆ ಎಂದರು.
ಈ ಸಂದರ್ಭ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ಆರಂಭವಾಗಿ ವಿಪಕ್ಷ ನಾಯಕ ಅಬ್ದುಲ್ ರವೂಫ್ ನಾನು ವಿರೋಧ ವ್ಯಕ್ತಪಡಿಸಿಲ್ಲಎಂದಾಗ, ಆಡಳಿತ ಪಕ್ಷದ ಸದಸ್ಯರು ಎಲ್ಲರು ಒಟ್ಟಾಗಿ ವಿಪಕ್ಷದ ಸದಸ್ಯರು ವಿರೋಧಿಸಿಲ್ಲವೇ ಎಂಬುದನ್ನು ಸ್ಥಾಯಿ ಸಮಿತಿ ಅಧ್ಯಕ್ಷರು ಉತ್ತರಿಸಬೇಕೆಂದರು ಹೇಳಿದ್ದಾರೆ.
ಈ ನಡುವೆ ವಿಪಕ್ಷ ಸದಸ್ಯರು ಆಕ್ಷೇಪದ ಕುರಿತಂತೆ ಮನವಿಯನ್ನು ಸದನದಲ್ಲಿ ಓದಿ ಹೇಳಿ ಎಂದು ಒತ್ತಾಯಿಸುತ್ತಿರುವಂತೆಯೇ ಪರಸ್ಪರ ಏರುಧ್ವನಿಗಳಲ್ಲಿ ವಾಗ್ವಾದ ಆರಂಭವಾಗಿ, ವಿಪಕ್ಷ ಸದಸ್ಯರಾದ ಶಶಿಧರ ಹೆಗ್ಡೆ, ಭಾಸ್ಕರ ಮೊಯಿಲಿ, ಪ್ರವೀಣ್ ಚಂದ್ರ ಆಳ್ವ, ಅನಿಲ್ ಕುಮಾರ್, ನವೀನ್ ಡಿ ಸೋಜ ಸೇರಿದಂತೆ ಇತರ ಸದಸ್ಯರು ಸದನದ ಬಾವಿಗಿಳಿದು ವಾಗ್ವಾದ ಆರಂಭಿಸಿದಾಗ, ಆಡಳಿತ ಪಕ್ಷದ ಸದಸ್ಯರೂ ವಾಗ್ವಾದ ನಡೆಸಿದರು. ಈ ಸಂದರ್ಭ ಉಪ ಮೇಯರ್ ಸಭೆಯನ್ನು ಮೊಟಕುಗೊಳಿಸಿ ಹೊರ ನಡೆದರು.