ಪುತ್ತೂರು, ಡಿ. 03 (DaijiworldNews/HR): ಶ್ವಾಸಕೋಶಕ್ಕೆ ಸಂಬಂಧಿಸಿದ ತೊಂದರೆಯಿಂದ ಬಳಲುತ್ತಿದ್ದ ಯುವತಿಯನ್ನು ಪುತ್ತೂರಿನಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್ ಮೂಲಕ ಅಲ್ಪಾವಧಿಯಲ್ಲಿಯೇ ಆಂಬ್ಯುಲೆನ್ಸ್ ಚಾಲಕ ಹನೀಫ್ ಕರೆದೊಯ್ದಿದಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಸುಹಾನಾ (22) ಅವರ ಶ್ವಾಸಕೋಶದಲ್ಲಿ ತುರ್ತು ಶಸ್ತ್ರಚಿಕಿತ್ಸೆ ಮಾಡಬೇಕಿದ್ದು, ಹನೀಫ್ ಆಕೆಯನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಯಿಂದ ಬೆಂಗಳೂರಿನ ವೈಟ್ಫೀಲ್ಡ್ ನಲ್ಲಿರುವ ವೈದೇಹಿ ಆಸ್ಪತ್ರೆಗೆ ಕರೆದೊಯ್ದರು. ಉಪ್ಪಿನಂಗಡಿ-ಗುರುವಾಯನಕೆರೆ-ಚಾರ್ಮಡಿ ಘಾಟ್ ಮಾರ್ಗದಲ್ಲಿ ಪ್ರಯಾಣಿಸಿ ಒಂದೂವರೆ ಗಂಟೆಗಳಲ್ಲಿ ಮೂಡಿಗರೆ ಹ್ಯಾಂಡ್ಪೋಸ್ಟ್ ತಲುಪಿ ಕೇವಲ 4.05 ಗಂಟೆಗಳಲ್ಲಿ ಬೆಂಗಳೂರು ತಲುಪಿದ್ದಾರೆ.
ಸಾರ್ವಜನಿಕರು ಝೀರೋ ಟ್ರಾಫಿಕ್ ಮೂಲಕ ಆಂಬ್ಯುಲೆನ್ಸ್ ಸಾಗಲು ಅನುಕೂಲ ಮಾಡಿಕೊಟ್ಟರು. ಡಿಸೆಂಬರ್ 2 ರ ಬುಧವಾರ ಬೆಳಿಗ್ಗೆ 11 ಗಂಟೆಗೆ ಪುತ್ತೂರಿನಿಂದ ಹೊರಟ ಆಂಬುಲೆನ್ಸ್ ಮಧ್ಯಾಹ್ನ 12.35 ಕ್ಕೆ ಮೂಡಿಗೆರೆ ಹ್ಯಾಂಡ್ಪೋಸ್ಟ್ ತಲುಪಿತು. ಝೀರೋ ಟ್ರಾಫಿಕ್ ಸಂಚಾರದ ವಾಟ್ಸಾಪ್ ಸಂದೇಶಗಳನ್ನು ರವಾನಿಸಲಾಗುತ್ತಿದ್ದಂತೆ, ಬಣಕಲ್, ಕೊಟ್ಟಿಗೆಹಾರ ಮುಂತಾದ ಯುವಕರ ತಂಡಗಳು ರಸ್ತೆ ಬದಿಯಲ್ಲಿ ನಿಂತು ಆಂಬುಲೆನ್ಸ್ಗೆ ಯಾವುದೇ ತೊಂದರೆಗಳಿಲ್ಲದೆ ಚಲಿಸುವಂತೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಬಣಕಲ್ನ ಸಾಮಾಜಿಕ ಕಾರ್ಯಕರ್ತ, ಮುಹಮ್ಮದ್ ಆರಿಫ್ ಮತ್ತು ಸಂಸ್ಥೆಗಳ ಸದಸ್ಯರು ಆಂಬುಲೆನ್ಸ್ ಸುಗಮವಾಗಿ ಸಾಗಲು ಸಹಾಯ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಹನೀಫ್, ಪ್ರತಿಯೊಂದು ಜೀವವೂ ಅಮೂಲ್ಯವಾದುದು ಮತ್ತು ಅದನ್ನು ಉಳಿಸುವುದು ಅತ್ಯಂತ ಮಾನವೀಯ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.
ಇನ್ನು ಪ್ರಾಣ ಉಳಿಸಲು ಪೊಲೀಸರೊಂದಿಗೆ ಸಾರ್ವಜನಿಕರು ಸಹಕರಿಸಿದ್ದಾರೆ ಎಂದು ಬಣಕಲ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶ್ರೀನಾಥ್ ರೆಡ್ಡಿ ಹೇಳಿದ್ದಾರೆ.