ಬಂಟ್ವಾಳ, ಡಿ.03 (DaijiworldNews/MB) : ಚಾಲಕನ ನಿಯಂತ್ರಣ ತಪ್ಪಿ ಆಟೋ ರಿಕ್ಷಾವೊಂದು ಪಲ್ಟಿಯಾದ ಪರಿಣಾಮ ಮೂರು ದಿನದ ಹಸುಗೂಸು ಮೃತಪಟ್ಟ ಘಟನೆ ತಾಲೂಕಿನ ಬೆಂಜನಪದವು ಸಮೀಪದ ಕಲ್ಪನೆ ತಿರುವು ಬಳಿ ಬುಧವಾರ ಸಂಜೆ ನಡೆದಿದೆ.

ಮೂರು ದಿನಗಳ ಹಿಂದೆ ಗುರುಪುರ - ಕೈಕಂಬ ಮೂಲದ ಉಮೈರಾ ಎಂಬವರು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಬುಧವಾರ ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಿ.ಸಿ.ರೋಡ್ ಕಡೆ ಬರುವ ಖಾಲಿ ಆ್ಯಂಬುಲೆನ್ಸ್ನಲ್ಲಿ ಕೈಕಂಬಕ್ಕೆ ಬಂದಿದ್ದರು. ಅಲ್ಲಿಂದ ಗೂಡಿನಬಳಿ ನಿವಾಸಿಯೋರ್ವರ ಆಟೋ ರಿಕ್ಷಾದಲ್ಲಿ ತಮ್ಮ ನಿವಾಸಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ.
ಆದರೆ ಬೆಂಜನಪದವು ಸಮೀಪದ ಕಲ್ಪನೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದ್ದು ಮಗು ಆಟೋ ರಿಕ್ಷಾದಿಂದ ಹೊರ ಎಸೆಯಲ್ಪಟ್ಟು ಸ್ಥಳದಲ್ಲಿಯೇ ಸಾವನ್ನಪ್ಪಿದೆ ಎಂದು ಹೇಳಲಾಗಿದೆ.
ಇನ್ನು ರಿಕ್ಷಾ ಚಾಲಕ ಹಾಗೂ ಇಬ್ಬರು ಮಹಿಳಾ ಪ್ರಯಾಣಿಕರಿಗೆ ಅಲ್ಪಸ್ವಲ್ಪ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.