ಮಂಗಳೂರು, ಡಿ.03 (DaijiworldNews/MB) : ಮಂಗಳೂರು ನಗರದಲ್ಲಿ ಉಗ್ರರ ಪರ ಗೋಡೆ ಬರಹ ಬರೆದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಮಂಗಳೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಯನ್ನು ತೀರ್ಥಹಳ್ಳಿಯ ನಝೀರ್ ಮುಹಮ್ಮದ್ (26)ಎಂದು ಗುರುತಿಸಲಾಗಿದೆ.
ಕದ್ರಿ ಪೊಲೀಸರು ಗುರುವಾರ ಮುಂಜಾನೆ ಆತನನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಮೊಬೈಲ್ ದಾಖಲೆ ಆಧಾರದಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.
ಮಂಗಳೂರಿನ ಸರ್ಕ್ಯೂಟ್ ಹೌಸ್ನ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ ಒಂದರ ಕೌಂಪೌಂಡ್ನ ಮೇಲೆ, ಸಂಘಿಗಳನ್ನು ಎದುರಿಸಲು ಲಷ್ಕರ್ ಇ ತೋಯ್ಬಾ ಹಾಗೂ ತಾಲಿಬಾನ್ಗೆ ಆಹ್ವಾನ ನೀಡುವಂತೆ ನಮ್ಮನ್ನು ಪ್ರೇರೇಪಿಸಬೇಡಿ ("Do not force us to invite Lashkar-e-Toiba and Taliban to Deal with Sanghis and Manvedis") ಎಂದು ಬರೆದಿದ್ದು ಹ್ಯಾಷ್ ಟ್ಯಾಗ್ ಹಾಕಿ, "ಲಷ್ಕರ್ ಜಿಂದಾಬಾದ್" ಎಂದು ಕೂಡಾ ಬರೆಯಲಾಗಿತ್ತು.